ಗಣಾಚಾರ ತತ್ವವನ್ನು ಎತ್ತಿಹಿಡಿದ ಶಿವಶರಣೆ ಕಾಲಕಣ್ಣಿಯ ಕಾಮಮ್ಮ

ಭಾಲ್ಕಿ : ಸೆ.23:ಕಾಲಕಣ್ಣಿಯ ಕಾಮಮ್ಮರ ಜನನದ ಮಾಹಿತಿ ನಿಖರವಾಗಿ ತಿಳಿದು ಬಂದಿಲ್ಲ.
” ಸಕಲ ಪುರಾತನದ ವಚನಗಳು” ಕಟ್ಟುಗಳಲ್ಲಿ ಬಸವಾದಿ ಶರಣರ ಸಮಕಾಲೀನ ಶರಣೆಯರ ಜೊತೆಗೆ ಈಕೆಯ ವಚನವು ಸೇರಿಕೊಂಡಿವೆ. ಹೆಸರಿನ ಹಿಂದೆ ಸೇರಿಕೊಂಡಿರುವ ಕಾಲಕಣ್ಣಿ ಎಂಬುದು ಆಕೆಯ ಕಾಯಕ ವೃತ್ತಿಯ ಸಂಕೇತವೆಂದು ಕರೆದಿದ್ದಾರೆ. ಕಣ್ಣಿ ಎಂದರೆ ದನಕರುಗಳನ್ನು ಕಟ್ಟುವ ಒಂದು ಬಗೆಯ ಹಗ್ಗ. ಇಂತಹ ಹಗ್ಗವನ್ನು ಹೊಸದು ಮಾರುವ ಕಾಯಕ ಇವರದಾಗಿತ್ತು. ಕೊರವರ ಜಾತಿಗೆ ಸೇರಿದವರೆಂದು
ಉಹಿಸಬಹುದಾಗಿದೆ.
ಇವರ ವಚನಗಳ ಅಂಕಿತ ನಾಮ “ನಿರ್ಭೀತ ನಿಜಲಿಂಗ”.
ಇವರ ಒಂದೇ ಒಂದು ವಚನ ಮಾತ್ರ ದೊರಕಿದೆ.
ಕಾಲಕಣ್ಣಿಯ ಕಾಮಮ್ಮರ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. ಕೆಲವರು ಈಕೆಯ 15ನೇ ಶತಮಾನದವಳು ಎಂದರೆ ಇನ್ನು ಕೆಲವರು ಇವರು 12ನೇ ಶತಮಾನಕ್ಕೆ ಸೇರಿರಬಹುದು ಎಂದು ಹೇಳುತ್ತಾರೆ. ಕರ್ನಾಟಕ ಕವಯತ್ರಿಯರು ಎಂಬ ಗ್ರಂಥದಲ್ಲಿ ಇವರನ್ನು ಕಾಲಕಣ್ಣಿಯ ಕಾಮಮ್ಮ ಮತ್ತು ಕಾಮಲಮ್ಮೆ ಎಂದು ಗುರುತಿಸಲಾಗಿದೆ. ಇವರ ವಚನದ ಅಂಕಿತನಾಮದಿಂದ ನಮಗೆ ತಿಳಿದುಬರುವುದೇನೆಂದರೆ ಇವರು ಯಾರಿಗೂ ಅಂಜದೆ, ಅಳುಕದೆ , ಧೈರ್ಯದಿಂದ ನಿರ್ಭೀತರಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರಬಹುದು ಎಂದು ತಿಳಿದು ಬರುತ್ತದೆ.
ಎನ್ನ ಕರಣಂಗಳ ಲಿಂಗದಲ್ಲಿ ಕಟ್ಟುವೆ,
ಗುರು-ಲಿಂಗ-ಜಂಗಮರ ಕಾಲ ಕಟ್ಟುವೆ,
ವ್ರತ ಭ್ರಷ್ಟರ ನಿಟ್ಟೊರಸುವೆ, ಸುಟ್ಟು ತುರಿತುರಿನೆ ತೂರುವೆ.
ನಿರ್ಭೀತಿ ನಿಜಲಿಂಗದಲ್ಲಿ?
ಮೊದಲನೆಯ ಸಾಲಿನಲ್ಲಿ ಹೇಳುವುದೇನೆಂದರೆ ಸದಾ ಚಂಚಲವಾಗಿರುವ ಇಂದ್ರಿಯಗಳನ್ನು ಲಿಂಗದಲ್ಲಿ ಕಟ್ಟಿಹಾಕುವೆ ಎಂದರೆ, ಸಾಧಕನು ಮೊದಲು ತನ್ನ ಎಲ್ಲಾ ಇಂದ್ರಿಯಗಳನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳಬೇಕು ಎಂಬ ಅರ್ಥ ಅಡಗಿದೆ.
ಎರಡನೆಯ ಸಾಲಿನಲ್ಲಿ ಹೇಳಿದಂತೆ ಸಾಧಕನಾದವನು ಗುರುಲಿಂಗಜಂಗಮರು ಸದಾ ತನ್ನ ಬಳಿಯೇ ಇರಬೇಕೆಂಬ ಭಾವನೆ ಇರಬೇಕು. ಅವರ ಕಾಲ ಕಟ್ಟುವೆ ಎಂದು ಹೇಳುತ್ತಾರೆ.
ಗುರು-ಲಿಂಗ-ಜಂಗಮದ ಕಾಲನ್ನು ಕಟ್ಟಿ ಆರಾಧಿಸಬೇಕೆಂದರೆ, ಸದಾ ಅವರ ಆದರದಲ್ಲಿಯೇ ಇರಬೇಕೆಂಬುದು ಅವರ ಅರ್ಥ. ಹೀಗೆ ಇಂದ್ರಿಯ ನಿಗ್ರಹ ಮಾಡಿ ಗುರು-ಲಿಂಗ-ಜಂಗಮದ ಸೇವೆಯಲ್ಲಿರುವವರು ನಿಜವಾದ ಸಾಧಕನು. ಈ ವೃತಗಳನ್ನು ನಾವು ಯಾವಾಗಲೂ ಆಚರಿಸಬೇಕು ಎಂದಿದ್ದಾರೆ.
ಹೀಗೆ ಮಾಡದವರು ವೃತಭ್ರಷ್ಟರು ಅವರನ್ನು ಸುಟ್ಟು ಬೂದಿ ಮಾಡಿ ತೂರುವುದಾಗಿ ಹೇಳುತ್ತಾರೆ.
ಇವರ ವಚನದಲ್ಲಿ ಮಾನಸಿಕ ಸ್ಥಿತಿ ಗುರು-ಲಿಂಗ-ಜಂಗಮರ ಮಹತ್ವ ಸಾಮಾಜಿಕ ಕಳಕಳಿ ತಪ್ಪಿತಸ್ಥರನ್ನು ಕಂಡು ಸಿಡಿದೇಳುವ ಮನೋಭಾವ ಕಂಡು ಬರುತ್ತದೆ. ಇದರಿಂದ ಗಣಾಚಾರ ತತ್ವವನ್ನು ಎತ್ತಿಹಿಡಿದ ಶಿವಶರಣೆ ಕಾಮವ್ವೆ ಎಂದು ಹೇಳಲಾಗಿದೆ. ಎಂದು ಡೋಣಗಾಪುರದ ಪೂಜ್ಯ ಮಾತೆ ದೇವಮ್ಮ ತಾಯಿ ಸೊನಾಳ ಗ್ರಾಮದ ರೇಖಾ ಬಸವರಾಜ ಕೋರೆ ರವರ
ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಅನುಭಾವ ನುಡಿದರು.
ಕು. ಜಗದೀಶ, ಕು.ಸುರೇಶ ಕೋರೆ , ಕವಿತಾ ಉದಗಿರ, ಶಿವಕುಮಾರ ಕೋರೆ, ಸುರೇಖಾ, ಅಭಿಷೇಕ, ಭಾಗ್ಯಶ್ರೀ ಕೋರೆ. ಆರತಿ ಪ್ರಭು ಅಜನೆ ದಾಕ್ಷಾಯಿಣಿ, ಸುಲೋಚನಾ , ವಿಮಲಬಾಯಿ, ಸತ್ಯವತಿ, ಶಿವರಾಜ ಧುಳೆ ಸೋನಾಳ, ಶಿವಚಂದ್ರ , ಹನುಮಶೆಟ್ಟಿ ಸೋನಾಳ, ಅಶೋಕ ಕಾರಾಮುಂಗೇ, ಮಂಡೋದರಿ, ರುಕ್ಮಿಣಿ, ಶೋಭಾ, ಆರತಿ ಉಪಸ್ಥಿತರಿದ್ದರು.
ಸುವರ್ಣಾ ವಚನ ಗಾಯನ ಮಾಡಿದರು.
ಮೀನಾಕ್ಷಿ ರಮೇಶ ವಿರಶಟ್ಟೆ ಸ್ವಾಗತಿಸಿದರು.
ಆರತಿ ಸೋಮನಾಥ ವಿರಶಟ್ಟೆ ನಿರೂಪಿಸಿದರು.