ಗಣರಾಜ್ಯೋತ್ಸವ ದಿನದಂದು ಕೃಷಿ ಉಪಕರಣಗಳ ಜೊತೆ ರೈತರ ಪೆರೇಡ್


ಬೆಂಗಳೂರು, ಜ.೧೦-ಮೂರು ಕೃಷಿ ಕಾನೂನುಗಳ ವಿರುದ್ಧ ರಾಷ್ಟ್ರ ರಾಜಧಾನಿಯಲ್ಲಿ ಹಲವು ದಿನಗಳಿಂದ ನಡೆಯುತ್ತಿರುವ ರೈತರ ಪ್ರತಿಭಟನೆ ಬೆಂಬಲಿಸಿ ಇದೇ ತಿಂಗಳ ೨೬ರಂದು ಬೆಂಗಳೂರಿನೊಳಗೆ ಟ್ರಾಕ್ಟರ್, ಟ್ರಾಲಿ ಮತ್ತು ಕೃಷಿ ಉಪಕರಣಗಳ ಜೊತೆ ‘ರೈತರ ಗಣರಾಜ್ಯದ ಪೆರೇಡ್ ಮಾಡುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ನಗರದಲ್ಲಿಂದು ಗಾಂಧಿ ಭವನದಲ್ಲಿ ಜಾಗೃತ ಕರ್ನಾಟಕ ಆಯೋಜಿಸಿದ್ದ, ರೈತ ವಿರೋಧಿ ಕಾಯ್ದೆಗಳು, ಕರ್ನಾಟಕಕ್ಕೆ ಆಗಿರುವ ಅನ್ಯಾಯಕ್ಕೇನು ಪ್ರತಿಕ್ರಿಯೆ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೆಹಲಿಯಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಗಿದೆ. ಆ ರೈತ ಸಮುದಾಯವನ್ನು ಬೆಂಬಲಿಸಿ ನಾವೂ ಸಹ ಬೀದಿಗಿಳಿಯಬೇಕು. ಈ ನಿಟ್ಟಿನಲ್ಲಿ ಈ ತಿಂಗಳಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ತಿಂಗಳ ೨೬ರಂದು ಟ್ರಾಕ್ಟರ್ ಚಳುವಳಿಗೆ ಸಿದ್ದರಾಗುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ನೂತನ ಕೃಷಿ ಕಾನೂನುಗಳ ರದ್ದತಿಗಾಗಿ ದೆಹಲಿಯ ಅನೇಕ ಗಡಿ ಪ್ರದೇಶಗಳಲ್ಲಿ ಪಂಜಾಬ್, ಹರಿಯಾಣ ಸೇರಿದಂತೆ ದೇಶದ ವಿವಿಧೆಡೆಗಳಿಂದ ಬಂದಿರುವ ಸಹಸ್ರಾರು ರೈತರು ಚಳಿ, ಮಳೆ ಎನ್ನದೇ ಟೆಂಟ್‌ಗಳಲ್ಲಿ ವಾಸಿಸುತ್ತಾ ಕಳೆದ ೪೦ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಇತ್ತ ಗಮನವೇ ನೀಡದೆ ಇರುವುದು ರೈತರ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ನಡೆಯುತ್ತಿರುವ ಚಳವಳಿ ಕೇವಲ ಪಂಜಾಬ್‌ಗೆ ಮಾತ್ರ ಸೀಮಿತ ಅಲ್ಲ, ಇದು ಭಾರತದ ಚಳವಳಿ. ಕೇಂದ್ರ ಸರ್ಕಾರ ಉದ್ಯಮಿಗಳ ಹಿತ ಕಾಯಲು ಇಂಥ ಹೊಸ ಕಾನೂನುಗಳನ್ನು ತಂದಿದೆ. ಬೇಕಿದ್ದರೆ ಕೇಂದ್ರ ಸರ್ಕಾರ ಈ ಬಗ್ಗೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬಹಿರಂಗ ಚರ್ಚೆ ಏರ್ಪಡಿಸಲಿ ಎಂದು ಸವಾಲು ಹಾಕಿದರು.
ತಮಿಳು ವ್ಯವಸಾಯಿಗಳ್ ಸಂಘದ ಸೆಲ್ವಮುತ್ತು ಮಾತನಾಡಿ, ರೈತ ಬೆಳೆದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ, ಬೆಲೆ, ಸೌಕರ್ಯ ಕಲ್ಪಿಸಿ ಕೊಡುವ ಕಾನೂನು ಎಪಿಎಂಸಿಯನ್ನೇ ಬಲಿ ಪಡೆದುಕೊಳ್ಳುವ ದುರುದ್ದೇಶ ಹೊಂದಿರುವುದು ಇಲ್ಲಿ ಸ್ಪಷ್ಟವಾಗುತ್ತದೆ. ಇಲ್ಲಿಯವರೆಗೂ ಕೃಷಿ ಉತ್ಪನ್ನ ಮಾರಾಟ ಸಮಿತಿ ಮೇಲಿನ ಎಲ್ಲಾ ಕಾರ್ಯಗಳನ್ನು ನಿರ್ವಹಿಸುತ್ತಿತ್ತು. ಆದರೀಗ ಕಾರ್ಪೋರೇಟ್ ಸಂಸ್ಥೆಗಳೂ ಭಾಗಿಯಾಗಿರುವುದರಿಂದ ಎಪಿಎಂಸಿ ಮುಚ್ಚುವ ಸಂಭವವಿದೆ.
ನಂತರ ರೈತರು ಕಾರ್ಪೋರೇಟ್ ಸಂಸ್ಥೆಗಳೂ ನಿಗದಿ ಪಡಿಸಿದ ಕನಿಷ್ಠ ಬೆಂಬಲ ಬೆಲೆಗೆ ತಲೆಬಾಗುವ ಸ್ಥಿತಿ ಎದುರಾಗುತ್ತದೆ. ಇತ್ತ ಸರ್ಕಾರದ ಕನಿಷ್ಠ ಬೆಂಬಲ ಬೆಲೆಯೇ ಕಡಿಮೆಯಿದೆ. ನಂತರದ ದಿನದಲ್ಲಿ ಕಾರ್ಪೋರೇಟ್ ಸಂಸ್ಥೆಗಳು ಇದಕ್ಕೂ ಕಡಿಮೆ ಬೆಲೆ ತಂದು ರೈತರನ್ನು ಬೀದಿಗೆ ತಳ್ಳುವ ಹುನ್ನಾರ ಇದಾಗಿದೆ ಎಂದು ದೂರಿದರು.
ಬರಗಾಲ ಪ್ಯಾಕೇಜ್ ನೀಡಿ: ೩೦ ಜಿಲ್ಲೆಗಳ ೧೫೬ ತಾಲೂಕುಗಳಲ್ಲಿ ಬರ ಇದೆ. ಆ ಪೈಕಿ ೧೦೭ ತಾಲೂಕುಗಳಲ್ಲಿ ಪರಿಸ್ಥಿತಿ ಭೀಕರವಾಗಿದೆ. ೪೯ ತಾಲೂಕುಗಳು ಸಾಧಾರಣ ಬರ ಇದೆ ಎಂದು ಕರ್ನಾಟಕ ಘೋಷಿಸಿದೆ. ಆದರೆ, ಬರ ಪರಿಹಾರ ಪ್ಯಾಕೇಜ್ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ಜಾಗೃತ ಕರ್ನಾಟಕದ ಡಾ.ಹೆಚ್.ವಿ.ವಾಸು ಚರ್ಚೆಯಲ್ಲಿ ಗಮನ ಸೆಳೆದರು.
ಸಂವಾದದಲ್ಲಿ ಆಂಧ್ರದ ರೈತ ಸ್ವರಾಜ್ಯ ವೇದಿಕೆಯ ಕಿರಣ್ ಕುಮಾರ್, ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ.ರಜಾಕ್ ಉಸ್ತಾದ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ತಾಕತ್ತು ಇದ್ದರೆ ಚರ್ಚೆಗೆ ಬನ್ನಿ..!
ರೈತರ ಹೋರಾಟದ ನೈತಿಕ ಶಕ್ತಿಯನ್ನು ಎದುರಿಸಲಾಗದೆ ಅಪಪ್ರಚಾರ ಮಾಡುತ್ತಿದ್ದಾರೆ. ರೈತರ ಬಗ್ಗೆ ಕಾಳಜಿ ಇರುವುದೇ ಆದರೆ ರೈತ ಸಂಘದ ಹತ್ತು ಜನ ಸಾಮಾನ್ಯ ಕಾರ್ಯಕರ್ತರನ್ನು ಮಾತುಕತೆಗೆ ಕಳುಹಿಸುತ್ತೇವೆ. ತಾಕತ್ತು ಇದ್ದರೆ ಇದೇ ತಿಂಗಳ ೧೬ರಂದು ಬೆಂಗಳೂರಿನಲ್ಲಿ ಬಹಿರಂಗ ಸಂವಾದ ಏರ್ಪಡಲಾಗಿದ್ದು, ಚರ್ಚೆಗೆ ಬನ್ನಿ ಎಂದು ಬಡಗಲಪುರ ನಾಗೇಂದ್ರ ಸವಾಲು ಹಾಕಿದರು.