ಗಣರಾಜ್ಯೋತ್ಸವ ಆಚರಿಸದಿರಲು ರೈತ ಸಂಘಟನೆಗಳ ನಿರ್ಧಾರ

ಮೈಸೂರು,ಜ,11-ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆಸುತ್ತಿರುವ ರೈತರ ಹೋರಾಟಕ್ಕೆ ರಾಜ್ಯದ ರೈತ ಸಂಘಟನೆಗಳು ಬೆಂಬಲ ನೀಡಿದ್ದು ಜ. 26 ರಂದು ಗಣರಾಜ್ಯೋತ್ಸವ ಆಚರಿಸದಿರಲು ನಿರ್ಧರಿಸಿವೆ‌.
ಜ.26ರಂದು  ಬೃಹತ್ ಕಿಸಾನ್ ಮಜ್ದೂರ್ ಟ್ರ್ಯಾಕ್ಟರ್ ಪರೇಡ್ ನಡೆಸಲು ರಾಜ್ಯ ರೈತ ಸಂಘ ಮುಂದಾಗಿದೆ. ಈ ಸಂಬಂಧ ಮೈಸೂರು ಪತ್ರಕರ್ತರ ಭವನದಲ್ಲಿ‌ ಸುದ್ಧಿಗೊಷ್ಠಿ ನಡೆಸಿ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು, ಗಣರಾಜ್ಯದ ಉಳಿವಿಗಾಗಿ ಲಕ್ಷಾಂತರ ರೈತರು ಮತ್ತು ಕಾರ್ಮಿಕರಿಂದ ದೆಹಲಿಯಲ್ಲಿ ಬೃಹತ್ ಹೋರಾಟ ನಡೆಯಲಿದೆ ಎಂದರು.
ನಮ್ಮ ರಾಜ್ಯದ ಪರವಾಗಿ 25 ಸಾವಿರಕ್ಕೂ ಅಧಿಕ ಮಂದಿ ದೆಹಲಿಗೆ ತೆರಳಲಿದ್ದಾರೆ. ಅದರ ಜೊತೆಗೆ ಬೆಂಗಳೂರಿನಲ್ಲೂ ಕೂಡ ಜನವರಿ 26 ರಂದು ಟ್ರ್ಯಾಕ್ಟರ್ ರ್ಯಾಲಿ ನಡೆಯಲಿದೆ  ಎಂದು ಮಾಹಿತಿ ನೀಡಿದರು.
ಹಾಗೆಯೇ ಈ ಹೋರಾಟಕ್ಕೆ ಇಡೀ ಭಾರತದಲ್ಲಿ 7 ಮಂದಿ ಸಂಯೋಜಕರನ್ನು‌ ನೇಮಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ನನ್ನನ್ನೂ ಕೂಡ ಸಂಯೋಜಕನನ್ನಾಗಿ ನೇಮಿಸಲಾಗಿದೆ. ಇನ್ನು ಐಕ್ಯ ಹೋರಾಟ ಸಮಿತಿಯ ಬದಲಾಗಿ 50 ಸಂಘಟನೆಗಳು ಸೇರಿ ಸಂಯುಕ್ತ ಹೋರಾಟ ಕರ್ನಾಟಕ ಸಂಘ ಎಂದು ಮಾಡಿಕೊಂಡಿದ್ದೇವೆ. ಇನ್ನು ಮುಂದೆ ಸಂಯುಕ್ತ ಹೋರಾಟ ಕರ್ನಾಟಕ ಸಂಘದ ಜೊತೆಯಲ್ಲಿ ನಮ್ಮ ಹೋರಾಟ ನಡೆಯಲಿದೆ ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.