ಗಣಪತಿ ಮೂರ್ತಿಗಳ ಮೆರವಣಿಗೆಗೆ ಮುನಿಸ್ವಾಮಿ ಚಾಲನೆ

ಕೋಲಾರ,ಸೆ.೪:ಯುವ ಸಮುದಾಯ ಜಾತಿ ಬೇಧ ಮರೆತು ಒಂದೇ ವೇದಿಕೆಗೆ ಸಂಘಟಿತಗೊಳ್ಳಲು ತಿಲಕ್ ವಿನಾಯಕ ವಿಸರ್ಜನಾ ಸಮಿತಿ ಅವಕಾಶ ಕಲ್ಪಿಸಿಕೊಟ್ಟಿರುವುದು ಸ್ವಾಗತಾರ್ಹ ಎಂದು ಲೋಕಸಭಾ ಸದಸ್ಯ ಎಸ್. ಮುನಿಸ್ವಾಮಿ ತಿಳಿಸಿದರು.
ನಗರದಲ್ಲಿ ಬಾಲಗಂಗಾಧರ ತಿಲಕ್ ವಿನಾಯಕ ವಿಸರ್ಜನಾ ಸಮಿತಿಯಿಂದ ನಡೆದ ಸಾರ್ವಜನಿಕ ಗಣಪತಿ ಮೂರ್ತಿಗಳ ಭವ್ಯ ಮೆರವಣಿಗೆಗೆ ಸಂಸದ ಎಸ್.ಮುನಿಸ್ವಾವಿ, ನಟ ಡಾಲಿ ಧನಂಜಯ್ ಹಾಗೂ ಮಾಜಿ ಸಚಿವ ವರ್ತೂರು ಪ್ರಕಾಶ್ ಚಾಲನೆ ನೀಡಿದ ಸಂದರ್ಭzಲ್ಲಿ ಅವರು ಮಾತನಾಡಿ ನಮ್ಮ ಭಾರತೀಯ ಸಂಸ್ಕೃತಿ, ಧರ್ಮ, ಪರಂಪರೆ ಉಳಿಸಲು ಯುವಕರು ಸಂಘಟಿತರಾಗಲು ಗಣೇಶನೇ ಅವಕಾಶ ಕಲ್ಪಿಸಿಕೊಟ್ಟಿದ್ದು, ವಿನಾಯಕ ಚೌತಿಯ ಆಚರಣೆಯ ಮೂಲಕ ಯುವಕರ ಸಂಘಟನೆ ಬಲಗೊಳ್ಳಲಿ ಎಂದರು.
ಕೋಲಾರ ಜಿಲ್ಲೆಯಲ್ಲಿ ಮಳೆಯಿಲ್ಲ ಬರಗಾಲ ಕಾಡುತ್ತಿದೆ, ಗಣಪ ಜಿಲ್ಲೆಗೆ ಒಳ್ಳೆಯ ಮಳೆ ತರಿಸಲಿ ಯುವ ಸಮುದಾಯದ ಬದುಕಿಗೆ ದಾರಿ ತೋರಲಿ ಎಂದು ಹಾರೈಸಿದ ಅವರು ಯಾವುದೇ ಕೋಮುಭಾವನೆಗೆ ಪ್ರಚೋದನೆ ನೀಡದೇ ಸೌಹಾರ್ದತೆ ಕಾಪಾಡಿಕೊಳ್ಳಲು ಈ ಕಾರ್ಯಕ್ರಮ ಸಹಕಾರಿಯಾಗಲಿ ಎಂದು ಶುಭ ಕೋರಿದರು.
ಸಾಂಸ್ಕೃತಕ,ಕಲಾ- ತಂಡಗಳ ಮೆರುಗು
ನಾದಸ್ವರ , ಡೋಲು ಮೆರವಣಿಗೆಯೊಂದಿಗೆ ಸಾಗಿದ್ದು, ಗಾರುಡಿಗೊಂಬೆ, ಕೀಲುಕುದುರೆ, ಕೋಲಾಟ, ಡೊಳ್ಳುಕುಣಿತ, ತಮಟೆ ಕಲಾವಿದರು, ಮೆರವಣಿಗೆಯಲ್ಲಿ ಸಾಗಿ ಬಂದಾಗ ೫೦ ಸಾವಿರಕ್ಕೂ ಮೀರಿದ ಜನಸ್ತೋಮ ರಸ್ತೆಯ ಇಕ್ಕೆಲಗಳಲ್ಲಿ ನಿಂತು ವೀಕ್ಷಿಸಿ ಆನಂದಿಸಿದರು.
ವಿವಿಧ ಬಡಾವಣೆಗಳು ಮತ್ತು ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಪ್ರತಿಷ್ಟಾಪಿಸಿದ ವಿವಿಧ ರೂಪಿ ಗಣಪ ಮೂರ್ತಿಗಳಲ್ಲಿ ಸಾಯಿ ರೂಪಿ ಗಣಪ, ನಾಟ್ಯ ಗಣಪ, ಹನುಮನೊಂದಿಗೆ ನಿಂತ ಗಣಪ, ಶಿವನ ತೊಡೆಯಮೇಲೆ ಗಣಪ, ನಂದಿಯ ಮೇಲೆ ಸವಾರಿ ಮಾಡುತ್ತಿರುವ ಗಣಪ, ಗಣಪ, ವಿಶ್ವರೂಪಿ ಗಣಪ, ಕಾಳಿಂಗ ಮರ್ಧಣ ಗಣಪ ಹೀಗೆ ಹತ್ತಾರು ಮಾದರಿಗಳು ಮೆರವಣಿಗೆಯಲ್ಲಿ ಸಾಗಿ ಬಂದವು. ಇಡೀ ಮೆರವಣಿಗೆಗೆ ಭಗವಧ್ವಜಗಳನ್ನಿಡಿದ ಯುವಕರು ರಸ್ತೆಯಲ್ಲಿ ಸಾಗಿ ಇಡೀ ಎಂ.ಜಿ.ರಸ್ತೆಕೇಸರಿಮಯವಾಗುವಂತೆ ಮಾಡಿದ್ದರು.
ಎಲ್ಲೆಲ್ಲಿಯೂ ಹಾರಾಡಿದ ಭಗವಧ್ವಜಗಳು, ಜಾತಿ, ಮತಗಳ ಬೇಧವಿಲ್ಲದೇ ಎಲ್ಲಾ ಯುವಜನರನ್ನು ಒಂದೇ ವೇದಿಕೆಗೆ ಸಂಘಟಿಸುವಲ್ಲಿ ತಿಲಕ್ ವಿನಾಯಕ ವಿಸರ್ಜನಾ ಸಮಿತಿ ಯಶಸ್ವಿಯಾಯಿತು.
ಭಜರಂಗದಳ, ವಿಹಿಂಪ, ನಗರದ ವಿವಿಧ ಯುವಕ, ಕನ್ನಡ, ಕ್ರೀಡಾ, ಸಮುದಾಯದ ಸಂಘಟನೆಗಳು ತಮ್ಮ ತಮ್ಮ ಬಡಾವಣೆಗಳಲ್ಲಿ ಮತ್ತು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರತಿಷ್ಟಾಪಿಸಿದ್ದ ಎಲ್ಲಾ ಗಣಪ ಮೂರ್ತಿಗಳನ್ನು ಮೆರವಣಿಗೆಗೆ ತರುವ ಮೂಲಕ ಒಂದೇ ವೇದಿಕೆಯಲ್ಲಿ ಮಿಲನಗೊಂಡಿತು.ಸ್ವಾತಂತ್ರ್ಯ ಹೋರಾಟಕ್ಕಾಗಿ ತಿಲಕರ ಆಶಯವಾಗಿದ್ದ ಈ ಗಣೇಶೋತ್ಸವ ಸಾವಿರಾರು ಮಂದಿ ಯುವಕರನ್ನು ಒಂದೇ ವೇದಿಕೆಯಲ್ಲಿ ಸಂಘಟಿತರಾಗುವಂತೆ ಮಾಡಿ ಧರ್ಮ ರಕ್ಷಣೆಗೆ ಆಶಯಗಳನ್ನು ಸಾಕಾರಗೊಳಿಸಿತು.
ನಗರದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ಬಂದಾಗ ಕೆಲವು ಪ್ರದೇಶಗಳಲ್ಲಿ ಮಹಿಳೆಯರು ಪುಷ್ಪವೃಷ್ಟಿ ಸುರಿಸಿ ಸ್ವಾಗತ ಕೋರಿದರು. ಮೆರವಣಿಗೆಯಲ್ಲಿ ೫೫ಕ್ಕೂ ಹೆಚ್ಚು ವಿವಿಧ ಬಡಾವಣೆ ಹಾಗೂ ಸುತ್ತಮುತ್ತಲ ಗ್ರಾಮಗಳ ಗಣೇಶ ಮೂರ್ತಿಗಳ ಪಲ್ಲಕ್ಕಿಗಳು ಪಾಲ್ಗೊಂಡಿದ್ದುದು ವಿಶೇಷವಾಗಿತ್ತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಚಿತ್ರನಟ ಡಾಲಿ ಧನಂಜಯ್, ಮಾಜಿ ಸಚಿವ ವರ್ತೂರು ಪ್ರಕಾಶ್, ಎಸ್ಪಿ ಡಿ.ದೇವರಾಜ್, ಮುಖಂಡರಾದ ಬೆಗ್ಲಿ ಸೂರ್ಯಪ್ರಕಾಶ್, ಕೆಯುಡಿಎ ಅಧ್ಯಕ್ಷ ವಿಜಯಕುಮಾರ್,ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ, ರಾಜ್ಯ ಅರಣ್ಯ ಅಭಿವೃದ್ದಿ ಸಮಿತಿ ಸದಸ್ಯ ಕೆ.ಎಸ್.ರಾಜೇಂದ್ರ ಮತ್ತಿತರರು ಪಾಲ್ಗೊಂಡಿದ್ದರು.
ಇಡೀ ಕಾರ್ಯಕ್ರಮದ ಉಸ್ತುವಾರಿಯನ್ನು ಬಾಲಗಂಗಾಧರ ತಿಲಕ್ ವಿನಾಯಕ ವಿಸರ್ಜನಾ ಸಮಿತಿಯ ಡಿ.ಆರ್.ನಾಗರಾಜ್,ವಿಹಿಂಪ ವೆಂಕಟೇಶ್, ಡಾ.ಶಿವಣ್ಣ, ಬಿಜೆಪಿಯ ವಿಶ್ವನಾಥ್ ಭಜರಂಗದಳದ ಬಾಲಾಜಿ,ಬಾಬು, ಅಪ್ಪಿ, ಮಂಜುನಾಥ್, ಬಿಜೆಪಿ ಸ್ಲಂಮೋಚಾರ ರಾಜ್ಯ ಕಾರ್ಯದರ್ಶಿ ಕೆ.ಎಸ್.ರಾಜೇಂದ್ರ ಮತ್ತಿತರರು ವಹಿಸಿದ್ದು, ವಿವಿಧ ಸಂಘಟನೆಗಳ ಮುಖಂಡರಾದ , ರವಿ, ಪ್ರಕಾಶ್, ಮಂಜುನಾಥ್, ಸಂಜಯ್, ಶ್ರೀನಿವಾಸ್, ಶಬರಿ, ನರೇಶ್, ಹರೀಶ್, ಕನಕೇಶ್ ನಾಗರಾಜ್, ಗಿರೀಶ್, ಪಿಳ್ಳಿ, ಮುರಳಿ ಮತ್ತಿತರ ನೂರಾರು ಯುವಕರು ವಹಿಸಿದ್ದರು.
ಮೆರವಣಿಗೆ ಎಂ.ಜಿ ರಸ್ತೆ, ಅಮ್ಮವಾರಿಪೇಟೆ ಎಂ.ಬಿ.ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ವೃತ್ತ, ಶಾರದಾ ಚಿಂತ್ರಮಂದಿರ ರಸ್ತೆ, ದೊಡ್ಡಪೇಟೆ, ಕಾಲೇಜು ವೃತ್ತ, ಇಟಿಸಿಎಂ ವೃತ್ತಗಳಲ್ಲಿ ಮೆರವಣಿಗೆ ನಡೆಯಿತು. ಮೆರವಣಿಗೆ ನಡೆದ ರಸ್ತೆ ಹಾಗೂ ವೃತ್ತಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಹಲವೆಡೆ ಬ್ಯಾರಿಕೇಡ್‌ಗಳನ್ನು ಹಾಕಿ ತಾತ್ಕಾಲಿಕವಾಗಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ಅಧಿಕಾರಿಗಳು ನಿಯಮಿತವಾಗಿ ಗಸ್ತು ನಡೆಸಿದರು.