ಗಣಜಲಖೇಡ: ಮಲ್ಲಿಕಾರ್ಜುನ ದೇವರ ಕಂಚಿನ ಮೂರ್ತಿ ಕಳವು

ಕಲಬುರಗಿ,ಜೂ.28-ತಾಲ್ಲೂಕಿನ ಗಣಜಲಖೇಡ ಗ್ರಾಮದ ಗುಡ್ಡದಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನದ ಬೀಗ ಮುರಿದು ಮಲ್ಲಿಕಾರ್ಜುನ ದೇವರ ಕಂಚಿನ ಮೂರ್ತಿ, ಸಮೆ, ಘಂಟೆ, ನಂದಿ ಬಸವನ ಕಂಚಿನ ಮೂರ್ತಿ ಕಳವು ಮಾಡಿಕೊಂಡು ಹೋದ ಘಟನೆ ನಡೆದಿದೆ.
ಈ ಸಂಬಂಧ ದೇವಸ್ಥಾನದ ಅರ್ಚಕರಾದ ಶಿವರಾಯ ಧರಿ ಎಂಬುವರು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಜೂ.25 ರಂದು ಬೆಳಿಗ್ಗೆ 9ಕ್ಕೆ ದೇವಸ್ಥಾನದ ಪೂಜೆ ಮಾಡಿ ಮನೆಗೆ ಬಂದಿದ್ದು, ಎಂದಿನಂತೆ ಜೂ.26 ರಂದು ಬೆಳಿಗ್ಗೆ ದೇವಸ್ಥಾನದ ಪೂಜೆ ಮಾಡಲು ಹೋದಾಗ ದೇವಸ್ಥಾನದ ಬೀಗ ಮುರಿದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ದೇವಸ್ಥಾನದ ಒಳಗಿದ್ದ 18 ಸಾವಿರ ರೂ.ಮೌಲ್ಯದ ಮಲ್ಲಿಕಾರ್ಜುನ ದೇವರ ಕಂಚಿನ ಮೂರ್ತಿ, 4 ಸಾವಿರ ರೂ.ಮೌಲ್ಯದ 2 ಸಮೆ, 2 ಸಾವಿರ ರೂ.ಮೌಲ್ಯದ 1 ಘಂಟೆ ಮತ್ತು 5 ಸಾವಿರ ರೂ.ಮೌಲ್ಯದ ನಂದಿ ಬಸವನ ಮೂರ್ತಿ ಸೇರಿ 29 ಸಾವಿರ ರೂ.ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.