ಗಡುವು ಮುಗಿದರೂ ಮುಕ್ತಿ ಕಾಣದ ರಸ್ತೆಗುಂಡಿ

ಬೆಂಗಳೂರು, ನ.೧೫-ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಕ್ತಕ್ಕೆ ಬಿಬಿಎಂಪಿ ನೀಡಿದ್ದ ಗಡುವು ಮುಕ್ತಾಯವಾಗಿದೆ. ಆದರೂ ಸಿಲಿಕಾನ್ ಸಿಟಿಯಲ್ಲಿ ರಸ್ತೆಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚಿಲ್ಲ. ಇದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಿನ್ನೆಯೂ ಬೈಕ್ ಸವಾರ ರಸ್ತೆ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಇತ್ತೀಚೆಗೆ ಇಂತಹ ಪ್ರಕರಣಗಳು ನಡೆಯುತ್ತಿದ್ದರೂ ಪಾಲಿಕೆ ಕ್ರಮ ಕೈಗೊಂಡಿಲ್ಲದಿರುವುದು. ವಾಹನ ಸವಾರರ ಕೆಂಗಣ್ಣಿಗೆ ಪಾಲಿಕೆ ಗುರಿಯಾಗಿದೆ.ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರಸ್ತೆಗುಂಡಿ ಮುಚ್ಚುವ ಕಾಮಗಾರಿ ಚುರುಕಿನಿಂದ ಸಾಗಿತ್ತು. ಈಗ ಮತ್ತೆ ವಿಳಂಬವಾಗುತ್ತಿದೆ.ಕಳೆದ ಹದಿನೈದು ದಿನಗಳ ಹಿಂದೆ ಸ್ವತಃ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಬೆಂಗಳೂರಿನಲ್ಲಿ ರಸ್ತೆಗಳಲ್ಲಿ ಗುಂಡಿ ಇಲ್ಲದಂತೆ ಮಾಡಲಾಗುವುದು ಎಂದು ಘೋಷಿಸಿದ್ದು ಮಾತ್ರವಲ್ಲದೆ, ನವೆಂಬರ್ ೧೫ರೊಳಗೆ ಗುಂಡಿಯೇ ಇಲ್ಲದಂತೆ ಮಾಡುತ್ತೇವೆ ಎಂದಿದ್ದರು.

ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಕೆರೆಯಂತಾಗಿರುವ ರಸ್ತೆ.

ಆದರೆ, ಈ ಗುರಿ ತಲುಪುವಲ್ಲಿ ಬಿಬಿಎಂಪಿ ವಿಫಲವಾಗಿದೆ.ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಇಂಜಿನಿಯರೊಬ್ಬರು, ನಾವು ರಸ್ತೆ ಗುಂಡಿ ಮುಚ್ಚಲು ಶ್ರಮವಹಿಸಿದ್ದೇವೆ. ಆದರೆ, ಇತ್ತೀಚೆಗೆ ನಗರದಲ್ಲಿ ಮಳೆ ಹಿನ್ನೆಲೆ ಕಾರ್ಮಿಕರಿಗೆ ಕೆಲಸ ಮಾಡಲು ಕಷ್ಟವಾಗಿತ್ತು.ಆದರೂ. ಬಹುತೇಕ ಕಡೆ ಗುಂಡಿ ಮುಚ್ಚುವ ಪ್ರಯತ್ನ ಮಾಡಿದ್ದೇವೆ ಎಂದು ತಿಳಿಸಿದರು.ಇನ್ನು, ಆದೇಶ ಪಾಲನೆ ಮಾಡದ ಇಂಜಿನಿಯರ್‌ಗಳನ್ನು ಅಮಾನತು ಮಾಡುವುದಾಗಿ ಆಯುಕ್ತರು ಪ್ರಕಟಿಸಿದ್ದರು. ಇದರಂತೆ ನಾಳೆಯಿಂದ ಅಮಾನತು ಕಾರ್ಯಕ್ಕೆ ಮುಂದಾಗುತ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.ಮಾಹಿತಿಗಳ ಪ್ರಕಾರ, ಈ ಬಾರಿ ಮಳೆಗಾಲದಲ್ಲಿ ನಗರದಲ್ಲಿ ಕಾಣಿಸಿಕೊಂಡ ಗುಂಡಿಗಳ ಸಂಖ್ಯೆ ೩೨೦೧೧ ರಷ್ಟು ಇದ್ದು, ಈ ಪೈಕಿ ಇಲ್ಲಿಯವರೆಗೆ ಮುಚ್ಚಲಾಗಿರುವ ಸುಮಾರು ಗುಂಡಿಗಳ ಸಂಖ್ಯೆ ೩೦ ಸಾವಿರ ದಾಟಿದೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ ಸುಮಾರು ೨ ಸಾವಿರ ಹೆಚ್ಚು ಗುಂಡಿ ಬಾಕಿ ಇದೆ ಎಂದು ಹೇಳಲಾಗುತ್ತಿದೆ.