ಗಡಿ ಭಾಗದ ಜನರಿಗೆ ಹೈನುಗಾರಿಕೆ ವರದಾನ

ಮಧುಗಿರಿ, ಜು. ೧೮- ಭೀಕರ ಬರಗಾಲದಿಂದ ತತ್ತರಿಸಿರುವ ಈ ಗಡಿ ಭಾಗದಲ್ಲಿ ಹೈನುಗಾರಿಕೆ ವರವಾಗಿ ಪರಿಣಮಿಸಿದೆ ಎಂದು ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಹೇಳಿದರು.
ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಎಮ್ಮೆ ತಿಮ್ಮನಹಳ್ಳಿ ಹಾಗೂ ಲಕ್ಷ್ಮಿಪುರದಲ್ಲಿ ನೂತನ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ವರ್ಷವಿಡಿ ಕಷ್ಟಪಟ್ಟು ವ್ಯವಸಾಯ ಮಾಡಿದರೂ ಲಾಭದಾಯವಾಗುತ್ತಿಲ್ಲ. ಈ ಭಾಗದಲ್ಲಿ ಯಾವುದೆ ಶಾಶ್ವತ ನೀರಾವರಿ ಯೋಜನೆಗಳಲ್ಲಿದೆ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಉಪ ಕಸುಬಾಗಿರುವ ಹೈನುಗಾರಿಕೆಯು ರೈತರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಿದೆ ಎಂದರು.
ಮಹಿಳೆಯ ಆರ್ಥಿಕ ಅಭಿವೃದ್ಧಿಗೆ ಈ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವನ್ನು ಸ್ಥಾಪಿಸಲಾಗಿದ್ದು ಪ್ರತಿ ತಿಂಗಳು ಸಭೆ ಆಯೋಜಿಸಿ ಚರ್ಚೆ ಮಾಡಿ ಸಂಘದ ಆಗು ಹೋಗುಗಳು ನಿಭಾಯಿಸಿ ಸಂಘದ ಅಭಿವೃದ್ಧಿಗೆ ಶ್ರಮಿಸಿ ಎಂದು ಕರೆ ನೀಡಿದರು.
ಸಂಘ ಬಲಿಷ್ಠವಾಗಿ ಬೆಳೆಯಬೇಕಾದರೆ ಗುಣಮಟ್ಟದ ಹಾಲು ಅವಶ್ಯಕ. ಸಂಘದ ಆಡಳಿತ ಮಂಡಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಸಂಘ ಲಾಭದಾಯವಾಗುತ್ತದೆ. ಸಂಘ ಲಾಭದಾಯಕವಾದರೆ ತುಮುಲ್ ವತಿಯಿಂದ ಹತ್ತು ಹಲವು ಪ್ರಯೋಜನೆಗಳು ಪಡೆಯಬಹುದು. ಗುಣಮಟ್ಟದ ಹಾಲು ಪೂರೈಕೆಯಾಗದಿದ್ದಲ್ಲಿ ಸಂಘಕ್ಕೆ ಜುಲ್ಮಾನೆ ಬೀಳುತ್ತದೆ ಎಂದರು.
ಗ್ರಾ.ಪಂ. ಸದಸ್ಯ ರಘು ಮಾತನಾಡಿ, ಈ ಗ್ರಾಮಗಳು ಆಂಧ್ರಗಡಿಗೆ ಸಿಲುಕಿದ್ದು, ಈ ಭಾಗದಲ್ಲಿ ಯಾವುದೆ ಬಸ್ ಸೌಕರ್ಯವಿಲ್ಲ. ಆಂಧ್ರ ಗಡಿ ಭಾಗದಿಂದ ಹಾಲು ಹಾಕಲು ಬೇಡತ್ತೂರಿಗೆ ಹೋಗಬೇಕಿತ್ತು. ಕನಿಷ್ಠ ಬಸ್ ಅಥವಾ ಆಟೋ ಸೌಕರ್ಯವಿಲ್ಲ. ಈ ಬಗ್ಗೆ ಉತ್ತಮ ಆಲೋಚನೆ ಮಾಡಿ ನಮ್ಮ ಗ್ರಾಮಕ್ಕೆ ಹಾಲು ಉತ್ಪಾದಕರ ಮಹಿಳಾ ಸಂಘ ನೀಡಿದ್ದು ಈ ಭಾಗದ ಜನತೆ ಮತ್ತು ರೈತರು ಎಂದಿಗೂ ಮರೆಯುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಜೇಂದ್ರಪ್ರಸಾದ್, ಗ್ರಾ.ಪಂ. ಸದಸ್ಯ ರಘು, ಮುಖಂಡರಾದ ತಿಮ್ಮಾರೆಡ್ಡಿ, ರಾಮಕೃಷ್ಣ, ಸಂಘದ ಅಧ್ಯಕ್ಷೆ ಜಯಮ್ಮ, ಉಪ್ಪಾಧ್ಯಕ್ಷೆ ಲಕ್ಷ್ಮಿದೇವಿ, ಕಾರ್ಯದರ್ಶಿ ಗೀತಾ ಬಿ.ಎನ್., ನಿರ್ದೇಶಕರಾದ ರೂಪಶ್ರೀ, ರುಕ್ಮಿಣಿ, ರಾಧಮ್ಮ, ಮಮತಾ, ಪ್ರಮೀಳಾ, ಮುಖಂಡ ಮಿಲ್‌ಚಂದ್ರು, ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಉಷಾನಾಗರಾಜು, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.