ಗಡಿ ಭಾಗದ ಜನರಿಗೆ ಬಸ್ ಸೌಕರ್ಯ

ಭಾಲ್ಕಿ:ಜ.7: ಗಡಿ ಭಾಗದ ಪ್ರಯಾಣಿಕರಿಗೆ ಸೇವೆ ಮತ್ತು ಅಭಿವೃದ್ಧಿ ದೃಷ್ಟಿಯಿಂದ ನೆರೆ ರಾಜ್ಯದ ಹೈದ್ರಾಬಾದಗೆ ತೆರಳಲು ಬಸ್ ಸೌಕರ್ಯ ಕಲ್ಪಿಸಲಾಗಿದೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಒಳಂಡಿ-ಭಾಲ್ಕಿ-ಹೈದ್ರಾಬಾದ್ ಮತ್ತು ಕಾಸರತೂಗಾಂವ-ಹೈದ್ರಾಬಾದ್ ಬಸ್‍ಗಳಿಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ,ಮಾತನಾಡಿದರು.
ಗಡಿ ಭಾಗದ ಸಾರ್ವಜನಿಕರು, ವರ್ತಕರು,ರೈತರು ,ರೋಗಿಗಳು ನೇರವಾಗಿ ಹೈದ್ರಾಬಾದಗೆ ಬಸ್ ಸೌಕರ್ಯ ಇಲ್ಲದಿರುವುದರಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರು.
ಹೀಗಾಗಿ ಗಡಿ ಭಾಗದ ವಳಂಡಿ-ಭಾಲ್ಕಿ,ಬೀದರ ಮಾರ್ಗವಾಗಿ ಹೈದ್ರಾಬಾದ್ ಮತ್ತು ಕಾಸರತೂಗಾಂವ-ಹೈದ್ರಾಬಾದ್ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಿರುವುದರಿಂದ ಜನರ ಬಹು ದಿವಸಗಳ ಬೇಡಿಕೆ ಈಡೇರಿಸಿದಂತಾಗಿದೆ.ಗ್ರಾಮೀಣ ಭಾಗದ ಜನರಿಗೆ ಸಾರಿಗೆ ಸೌಕರ್ಯ ಒದಗಿಸಿದಲ್ಲಿ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.ಸಾರ್ವಜನಿಕರು ಅದರ ಲಾಭ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಬಸ್ ಘಟಕ ವ್ಯವಸ್ಥಾಪಕ ಭದ್ರಪ್ಪ ಅವರು,ಶಾಸಕ ಖಂಡ್ರೆಯವರು ಗಡಿ ಭಾಗದ ಜನರ ಕಷ್ಟ ಅರಿತು ಎರಡು ಬಸ್ ಓಡಿಸಲು ಅನುವು ಮಾಡಿಕೊಟ್ಟು,ಬಹು ದಿವಸಗಳ ಬಯಕೆ ತೃಪ್ತಿಪಡಿಸಿದ್ದಾರೆ.ವಳಂಡಿ ಮತ್ತು ಕಾಸರತುಗಾಂವ ಗ್ರಾಮದಿಂದ ಪ್ರತಿನಿತ್ಯ ಬೆಳಿಗ್ಗೆ 6.00 ಗಂಟೆಗೆ ಎರಡು ಬಸ್‍ಗಳು ಬೀದರ,ಜಹಿರಾಬಾದ ಮಾರ್ಗವಾಗಿ ಹೈದ್ರಾಬಾದ ತಲುಪುತ್ತವೆ.ಮತ್ತೇ ಮರಳಿ ಎರಡು ಗ್ರಾಮಗಳಲ್ಲಿ ವಾಸ್ತವ್ಯ ಮಾಡುತ್ತವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ವಿಜಯಕುಮಾರ ರಾಜಭವನ,ಪ್ರಮುಖರಾದ ಅಶೋಕರಾವ ಸೂರ್ಯವಂಶಿ,ದಯಾನಂದ ಸೂರ್ಯವಂಶಿ,ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಶಶಿಧರ ಕೋಸಂಬೆ,ಪ್ರ.ದರ್ಜೆ ಗುತ್ತಿಗೆದಾರ ಸಂಗಮೇಶ ಹುಣಜೆ,ಬಸ್ ನಿಯಂತ್ರಕ ಭೀಮಣ್ಣ ಮತ್ತು ರಾಜಕುಮಾರ,ಯಾಂತ್ರಿಕ ಸಹಾಯಕ ರೇವಣಸಿದ್ಧ ಧೂಳೆ,ನಾಗನಾಥ ಪಾಟೀಲ್,ಭದ್ರಪ್ಪ ಹುಡಗೆ,ದಿನಕರ ರಾಜೋಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.