ಗಡಿ ಭಾಗದಲ್ಲಿ ಕನ್ನಡ ಭಾಷೆಗೆ ಒತ್ತು ನೀಡಲು ಕರೆ

ತುಮಕೂರು, ಅ. ೩೦- ಗಡಿ ಭಾಗದಲ್ಲಿರುವವರು ಕನ್ನಡ ಭಾಷೆಯನ್ನು ಮರೆಯದೆ ನಿತ್ಯ ವ್ಯವಹಾರ, ಮನೆಯಲ್ಲಿ ಕನ್ನಡವನ್ನೇ ಮಾತನಾಡಬೇಕೆಂದು ಸಾಹಿತಿ ಕಾರನಾಗಪ್ಪ ಕರೆ ನೀಡಿದರು.
ಬೆಂಗಳೂರಿನ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಪಾವಗಡ ತಾಲ್ಲೂಕು ಬೆಳ್ಳಿಬಟ್ಲು ಏಕಲವ್ಯ ಗಿರಿಜನ ಜಾನಪದ ಸಾಂಸ್ಕೃತಿಕ ಕಲಾಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ “ಕನ್ನಡಕ್ಕಾಗಿ ನಾವು” ಅಭಿಯಾನದ ಅಂಗವಾಗಿ ಏರ್ಪಡಿಸಿದ್ದ “ಜಾನಪದ ಉತ್ಸವ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದ ಕಲಾವಿದ ಬಲರಾಮ ಮಾತನಾಡಿ, ಈ ಬಾರಿ ಸರ್ಕಾರವು ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಒಂದು ವಾರಗಳ ಕಾಲ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದಲ್ಲದೇ ಕನ್ನಡ ಗೀತ ಗಾಯನ, ಅಚ್ಚ ಕನ್ನಡದಲ್ಲಿ ಮಾತನಾಡುವ
ಸ್ಪರ್ಧೆ ಮೊದಲಾದ ಕಾರ್ಯಕ್ರಮಗಳನ್ನು ಏರ್ಪಡಿಸಿ, ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮಗಳಿಂದ ನಾಡಿನ ಎಲ್ಲರಲ್ಲೂ ಕನ್ನಡತನ ಮೂಡಿಬರಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಬೆಳ್ಳಿಬಟ್ಲು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ರಾಜಣ್ಣ, ಗ್ರಾಮದ ಮುಖಂಡ ಎಂ.ಜಿ ನಾರಾಯಣಪ್ಪ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಗೀತ ಗಾಯನ, ಭಜನಾ ಕಾರ್ಯಕ್ರಮ, ನಾಸಿಕ್‌ಡೋಲು ಹಾಗೂ ಗಾರುಡಿಗೊಂಬೆ ಪ್ರದರ್ಶನ ಜರುಗಿತು.