ಗಡಿ ಭಾಗಗಳಲ್ಲಿ ಕಟ್ಟುನಿಟ್ಟಾಗಿ ನೀತಿ ಸಂಹಿತೆ ಪಾಲನೆ: ಜಿಲ್ಲಾಧಿಕಾರಿಗಳ ಸಭೆ

ಸಂಜೆವಾಣಿ ವಾರ್ತೆ
ಚಾಮರಾಜನಗರ,ಫೆ.22- ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಅಂತರ ರಾಜ್ಯಗಡಿ ಜಿಲ್ಲೆಗಳ ಭಾಗಗಳಲ್ಲಿ ಕಟ್ಟುನಿಟ್ಟಾಗಿ ನೀತಿ ಸಂಹಿತೆ ಪಾಲನೆ ಮಾಡುವ ಸಂಬಂಧ ಇಂದು ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಹಾಗೂ ತಮಿಳುನಾಡು ರಾಜ್ಯದ ಈರೋಡ್ ಜಿಲ್ಲಾ ಕಲೆಕ್ಟರ್ ಎಸ್.ರಾಜಗೋಪಾಲ್ ಅವರ ಸಮ್ಮುಖದಲ್ಲಿ ಸಭೆ ನಡೆಯಿತು.
ಚಾಮರಾಜನಗರ ತಾಲೂಕಿನ ಸುವರ್ಣಾವತಿಯ ಪ್ರವಾಸಿ ಮಂದಿರದಲ್ಲಿಂದು ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಯಾಗದಂತೆ ಪಾಲಿಸಬೇಕಿರುವ ಕಟ್ಟುನಿಟ್ಟಿನ ಕ್ರಮಗಳ ಕುರಿತು ನಡೆದ ಅಂತರ ರಾಜ್ಯಗಡಿ ಜಿಲ್ಲೆಗಳ ಹಿರಿಯ ಅಧಿಕಾರಿಗಳ ಜಂಟಿ ಸಮನ್ವಯ ಸಮಿತಿ ಸಭೆಯಲ್ಲಿ ವಿಸೃತವಾಗಿ ಚರ್ಚಿಸಲಾಯಿತು.
ಚುನಾವಣಾ ಅಕ್ರಮಗಳಿಗೆ ಅವಕಾಶವಾಗದಂತೆ ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸಬೇಕು. ಅಕ್ರಮ ಮದ್ಯ, ದಾಖಲೆ ಇಲ್ಲದ ಹಣ, ಆಮಿಷವೊಡ್ಡುವ ಉಡುಗೊರೆ, ವಸ್ತುಗಳ ಸಾಗಾಣಿಕೆ ಮೇಲೆ ನಿಗಾ ಇಡಬೇಕು. ಅಕ್ರಮಗಳು ಕಂಡು ಬಂದ ಕೂಡಲೇ ಜಪ್ತಿ ಮಾಡಿ ನಿಯಮಾನುಸಾರಕ್ರಮ ಜರುಗಿಸಬೇಕೆಂದು ಸೂಚಿಸಲಾಯಿತು. ಗಡಿಭಾಗಗಳಲ್ಲಿ ಶಾಶ್ವತ ಚೆಕ್‍ಪೋಸ್ಟ್‍ಗಳೊಂದಿಗೆ ತಾತ್ಕಾಲಿಕ ಚೆಕ್‍ಪೋಸ್ಟ್‍ಗಳು ಸಕ್ರಿಯವಾಗಿ ಕಾರ್ಯ ನಿರ್ವಹಣೆಯಾಗಬೇಕು. ಗಡಿ ಭಾಗದಲ್ಲಿ ಸಂಚರಿಸುವ ವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆಯಾಗಬೇಕು. ಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ಕಣ್ಗಾವಲು ಇರಬೇಕು. ಪರಸ್ಪರ ಉಭಯ ಜಿಲ್ಲೆಗಳ ಅಧಿಕಾರಿಗಳ ಸಮನ್ವಯ ಸಹಕಾರದಿಂದ ಯಾವುದೇ ಲೋಪಗಳಿಗೆ ಅವಕಾಶವಾಗದಂತೆ ನೋಡಿಕೊಳ್ಳುವುದರ ಕುರಿತು ವಿವರವಾಗಿ ಚರ್ಚಿಸಲಾಯಿತು.
ಅರಣ್ಯದಂಚಿನ ಗ್ರಾಮಗಳ ಮೂಲಕ ಸಂಚರಿಸುವ ವಾಹನಗಳ ಮೇಲೂ ನಿಗಾ ಇರಿಸಬೇಕು. ಎಲ್ಲಿಯೇ ಆಗಲಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ತೀವ್ರವಾಗಿ ಪರಿಶೀಲಿಸಬೇಕು. ಉಭಯ ಜಿಲ್ಲೆಗಳಲ್ಲಿಯೂ ಕಂಟ್ರೋಲ್ ರೂಂಗೆ ಮಾಹಿತಿ ನೀಡುವ ವ್ಯವಸ್ಥೆಯಾಗಬೇಕು. ಸಂಪರ್ಕ ವ್ಯವಸ್ಥೆ ಅಲಭ್ಯವಾಗುವಕಡೆ ಹಾಟ್‍ಲೈನ್ ಸಂಪರ್ಕ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಗಡಿಭಾಗದ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟವಾಗದಂತೆ ಎಚ್ಚರಿಕೆ ವಹಿಸಬೇಕು. ಇದಕ್ಕಾಗಿಯೆಗಡಿ ಗ್ರಾಮಗಳ ಅಂಗಡಿಗಳಲ್ಲಿ ವ್ಯಾಪಕವಾಗಿ ತಪಾಸಣಾ ಕಾರ್ಯವನ್ನು ಅಬಕಾರಿ ಅಧಿಕಾರಿಗಳು ಚುರುಕುಗೊಳಿಸಬೇಕಾಗುತ್ತದೆ. ಮಾದಕ ವಸ್ತುಗಳ ಕಾರ್ಯ ಚಟುವಟಿಕೆಗಳ ಮೇಲೂ ಹೆಚ್ಚಿನ ನಿಗಾ ಇಡಬೇಕು. ಯಾವುದೇ ಅಕ್ರಮಗಳು ನಡೆಯದಂತೆ ಪಾರದರ್ಶಕವಾಗಿ ಚುನಾವಣೆ ನಡೆಯಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಅತ್ಯಂತ ಬಿಗಿಯಾಗಿ ಜಾರಿಗೊಳಿಸಬೇಕು ಎಂದು ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ತಿಳಿಸಿದರು.
ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಈರೋಡ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಜವಾಹರ್, ಚಾಮರಾಜನಗರ ಜಿಲ್ಲೆಯ ಹಿರಿಯ ಅರಣ್ಯ ಅಧಿಕಾರಿಗಳಾದ ದೀಪಾ ಕಂಟ್ರಾಕ್ಟರ್, ಡಾ. ಸಂತೋಷ್, ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದ ಉಪನಿರ್ದೇಶಕರಾದ ಕೆ. ಸುಧಾಕರ್, ಚಾಮರಾಜ ನಗರಜಿಲ್ಲೆಯ ತಾಲೂಕುಗಳ ತಹಶೀಲ್ದಾರರಾದ ಬಸವರಾಜು, ರಮೇಶ್ ಬಾಬು, ಮಂಜುಳಾ, ವಿರೂಪಾಕ್ಷ, ಸಹಾಯಕ ಚುನಾವಣಾಧಿಕಾರಿಗಳಾದ ಮಲ್ಲಿಕಾರ್ಜುನ್, ಯೋಗಾನಂದ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಗಾಯತ್ರಿ ಸೇರಿದಂತೆ ಉಭಯ ಜಿಲ್ಲೆಗಳ ಅಬಕಾರಿ, ಪೊಲೀಸ್, ಕಂದಾಯ, ಇತರೆ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.