ಗಡಿ ಬಂದ್ ಮಾಡಿ ರೈತರ ಆಕ್ರೋಶ

ನವದೆಹಲಿ, ಜ.೨- ನೂತನ ಕೃಷಿ ಕಾಯ್ದೆಯನ್ನು ಹಿಂಪಡೆವಂತೆ ಆಗ್ರಹಿಸಿ ರೈತರು ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ದೆಹಲಿಯ ಗಡಿಭಾಗದಲ್ಲಿ ಹೋರಾಟ ಮುಂದುವರಿಸಿದ್ದು ಇಂದೂ ಕೂಡ ತಿಕ್ರಿ, ಸಿಂಧು ಗಡಿಭಾಗ ಮುಚ್ಚಿ ಆಕ್ರೋಶ ವ್ಯಕ್ತಪಡಿಸಿದರು..

ನಾಡಿದ್ದು ಕೇಂದ್ರ ಸರ್ಕಾರ ರೈತರೊಂದಿಗೆ ಏಳನೇ ಸುತ್ತಿನ ಮಾತುಕತೆ ನಡೆಸಲು ಉದ್ದೇಶಿಸಿದೆ. ಜನವರಿ ೪ರಂದು ನಡೆಯಲಿರುವ ಮಾತುಕತೆಯಲ್ಲಿ ಬೇಡಿಕೆ ಈಡೇರಿಸದಿದ್ದರೆ ಮತ್ತಷ್ಟು ಹೋರಾಟ ತೀವ್ರಗೊಳಿಸುವುದಾಗಿ ರೈತರು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸಿಂಧು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಪ್ರತಿಕ್ರಿಯಿಸಿ ಕೇಂದ್ರ ಸರ್ಕಾರ ರೈತರ ಕೇವಲ ಐದರಷ್ಟು ಬೇಡಿಕೆಗಳನ್ನು ಈಡೇರಿಸಲು ಮಾತ್ರ ಸಮ್ಮತಿಸಿದೆ ಆದರೆ ಇನ್ನೂ ೯೫ರಷ್ಟು ಬೇಡಿಕೆಗಳನ್ನು ಈಡೇರಿಸಲು ಮೀನಾಮೇಷ ಎಣಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ..

ಗಡಿ ಬಂದ್:

ದೆಹಲಿಯ ಹೊರ ವಲಯದ ಸಿಂದೂ ಮತ್ತು ತಿಕ್ರಿ ಗಡಿಯನ್ನು ಸಂಪೂರ್ಣವಾಗಿ ಬಂದ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

ದೆಹಲಿಯ ಗಡಿಭಾಗದಲ್ಲಿ ರೈತರು ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಬೇಡಿಕೆ ಈಡೇರುವ ತನಕ ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಬಿಗಿಪಟ್ಟು ಮುಂದುವರಿಸಿದ್ದಾರೆ.

ದೆಹಲಿಯನ್ನು ಸಂಪರ್ಕಿಸುವ ವಿವಿಧ ರಾಜ್ಯಗಳ ಗಡಿಭಾಗವನ್ನು ರೈತರು ಸಂಪೂರ್ಣವಾಗಿ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಸಂಪರ್ಕಿಸುವ ರಸ್ತೆಗಳಿಗೆ ಪರ್ಯಾಯ ಮಾರ್ಗದ ಮೂಲಕ ವಾಹನಗಳನ್ನು ದೆಹಲಿ ಪೊಲೀಸರು ಬಿಡುವ ಕೆಲಸ ಮಾಡುತ್ತಿದ್ದಾರೆ.

ಬಿಗಿ ಭದ್ರತೆ:
ರೈತರು ೩೮ ದಿನಗಳಿಂದ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿ ಪೊಲೀಸರು ವ್ಯಾಪಕ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಿದ್ದಾರೆ