ಗಡಿ ದಾಟಿದ ಪಾಕ್ ಬಾಲಕ ಮಾನವೀಯತೆ ಮೆರೆದ ಸೈನಿಕರು

ಬಾರ್ಮರ್.ಏ.೩- ಆಕಸ್ಮಿಕವಾಗಿ ಗಡಿ ದಾಟಿ ಭಾರತ ದೇಶದೊಳಗೆ ಆಗಮಿಸಿದ ೮ ವರ್ಷದ ಬಾಲಕನನ್ನು, ಭಾರತ ದೇಶದ ಸೈನಿಕರು ಸುರಕ್ಷಿತವಾಗಿ ಪಾಕಿಸ್ತಾನ ಸೈನಿಕರಿಗೆ ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪಾಕಿಸ್ತಾನದ ಥಾರ್ ಪಾರ್ಕರ್ ಜಿಲ್ಲೆಯ ಕರೀಮ್ ಎಂಬ ೮ ವರ್ಷದ ಬಾಲಕನೇ ಗಡಿ ದಾಟಿ ದೇಶದೊಳಗೆ ಬಂದಾತ. ಶುಕ್ರವಾರ ಸಂಜೆ ೫ ಗಂಟೆ ಸುಮಾರಿಗೆ ಬಾರ್ಮರ್’ನ ಬಕ್ಸಾರ್ ಗಡಿಯ ಪಕ್ಕದಿಂದ ಭಾರತದ ಗಡಿಯೊಳಗೆ ಆಗಮಿಸಿದ್ದ. ನಂತರ ಭಯಭೀತನಾಗಿ ಜೋರಾಗಿ ಅಳಲು ಆರಂಭಿಸಿದ್ದ.
ಇದನ್ನು ಗಮನಿಸಿದ ಭಾರತ ಸೈನಿಕರು, ಅಳುತ್ತಿದ್ದ ಬಾಲಕನನ್ನು ಸಮಾಧಾನ ಪಡಿಸಿದ್ದಾರೆ. ಆಹಾರ ನೀಡಿ ಸಂತೈಸಿದ್ದಾರೆ. ತದನಂತರ ಬಿಎಸ್‌ಎಫ್ ಅಧಿಕಾರಿಗಳು, ಪಾಕಿಸ್ತಾನ ರೇಂಜರ್ಸ್ ಜೊತೆ ಧ್ವಜ ಸಭೆ ನಡೆಸಿದರು. ನಂತರ ಬಾಲಕನನ್ನು ಆ ದೇಶದ ಸೈನಿಕರಿಗೆ ಹಸ್ತಾಂತರಿಸಿದರು.
ಈ ವೇಳೆ ಪಾಕಿಸ್ತಾನ ರೇಂಜರ್ಸ್ ದೇಶದ ಸೈನಿಕರ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಕಾರಣವಾಗಿದೆ.