ಗಡಿ ಜಿಲ್ಲೆ ಬೀದರಿಗೆ ಹಿಂದಿನ ಡಿ.ಸಿ ರಾಮಚಂದ್ರನ್ ಕೊಡುಗೆ ಅಪಾರ

ಭಾಲ್ಕಿ: ಜು.14:ಪಿ.ಯು ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಗಡಿ ಜಿಲ್ಲೆಯಾದ ಬೀದರಿಗೆ ಹಿಂದಿನ ಜಿಲ್ಲಾಧಿಕಾರಿ ರಾಮಚಂದ್ರನ್ ರವರ ಕೊಡುಗೆ ಅಪಾರವಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಓಂಕಾರ ಸೂರ್ಯವಂಶಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿರುವ ಹಿಂದಿನ ಜಿಲ್ಲಾಧಿಕಾರಿ ರಾಮಚಂದ್ರನ್‍ರವರಿಗೆ ಜಿಲ್ಲೆಯ ಉಪನ್ಯಾಸಕರ ನಿಯೋಗದೊಂದಿಗೆ ಸನ್ಮಾನಿಸಿ ಮಾತನಾಡಿದ ಅವರು, ಬೀದರ ಜಿಲ್ಲಾಧಿಕಾರಿಗಳಾಗಿದ್ದ ಸಂದರ್ಭದಲ್ಲಿ ರಾಮಚಂದ್ರನ್ ರವರು ಮಾಡಿರುವ ಪ್ರಯತ್ನದಿಂದಲೇ ಇಂದು ಪಿ.ಯೂ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯನ್ನು ನಮ್ಮ ಜಿಲ್ಲೆಯೆಲ್ಲಿಯೇ ಬರೆಯುಂತಾಗಿದೆ. ಇಲ್ಲದಿದ್ದರೆ ರಾಷ್ಟ್ರಮಟ್ಟದ ನೀಟ್ ಪರೀಕ್ಷೆ ಬರೆಯಲು ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಬೆಂಗಳೂರು, ಹೈದ್ರಾಬಾದ್, ಕಲಬುರಗಿಗೆ ಹೋಗಬೇಕಾಗಿತ್ತು. ಇದು ಸಾಮಾನ್ಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನುಂಗಲಾರದ ತುತ್ತಾಗಿತ್ತು. ನೀಟ್ ಪರೀಕ್ಷೆ ಬರೆಯಲು ದೂರದ ಊರುಗಳಿಗೆ ತೆರಳಿ ಅಲ್ಲಿ ತಂಗಿ ಪರೀಕ್ಷೆ ಬರೆಯಲು ನಮ್ಮ ಜಿಲ್ಲೆಯ ಬಡ ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದರು. ರಾಮಚಂದ್ರನ್ ರವರು ಜಿಲ್ಲಾಧಿಕಾರಿಗಳಾಗಿದ್ದ ಸಮಯದಲ್ಲಿ ಉಪನ್ಯಾಸಕರ ಸಂಘದ ಮನವಿಯ ಮೇರೆಗೆ ಜಿಲ್ಲೆಯಲ್ಲಿಯೇ ಸಾವಿರಾರು ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯುವಂತೆ ಅನುವು ಮಾಡಿಕೊಟ್ಟಿದ್ದಾರೆ. ಹೀಗಾಗಿ ಬರುವ ಜುಲೈ 17 ರಂದು ನಡೆಯಲಿರುವ ನೀಟ್ ಪರೀಕ್ಷೆಯು ಜಿಲ್ಲೆಯ ಸುಮಾರು 5 ಸಾವಿರ ವಿದ್ಯಾರ್ಥಿಗಳು ಬೀದರ ಮತ್ತು ಭಾಲ್ಕಿಯಲ್ಲಿ ಪರೀಕ್ಷೆ ಬರೆಯುಂತಾಗಿದೆ ಎಂದು ಸಂತಸ ವ್ಯಕ್ತ ಪಡಿಸಿದರು.