ಗಡಿ ಖ್ಯಾತೆ ಅಜಿತ್‌ಗೆ ಬಿಎಸ್‌ವೈ ತರಾಟೆ

ಬೆಂಗಳೂರು, ನ. ೧೮- ಬೆಳಗಾವಿ, ಕಾರವಾರ, ನಿಪ್ಪಾಣಿ, ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿಕೆಗೆ ಕೆಂಡಾಮಂಡಲವಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ, ಅನಗತ್ಯ ಖ್ಯಾತೆ ಸಲ್ಲದು ಎಂದು ತಿರುಗೇಟು ನೀಡಿದ್ದಾರೆ.
ಅಜಿತ್ ಪವಾರ್ ಖ್ಯಾತೆ ತೆಗೆಯಲು ಮತ್ತು ಜನರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಬೆಳಗಾವಿಯ ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ ಎಂದು ಜಗತ್ತಿಗೇ ಗೊತ್ತಿದೆ. ಆದರೂ ಅವರ ಉದ್ಧಟತನದ ಹೇಳಿಕೆ ಖಂಡನಾರ್ಹ ಎಂದು ತಿಳಿಸಿದ್ದಾರೆ.
ವಿಧಾನಸೌಧದಲ್ಲಿಂದು ಸಚಿವ ಸಂಪುಟ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ರಾಜ್ಯದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದು ರಾಜ್ಯದಲ್ಲಿರುವ ಮರಾಠ ಜನಾಂಗದ ಅಭಿವೃದ್ಧಿಗಾಗಿ ಹೊರತು ಮರಾಠಿ ಭಾಷೆ ಅಭಿವೃದ್ಧಿಗಲ್ಲ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರ ಮಹಾರಾಷ್ಟ್ರ ಉಪಮುಖ್ಯಮಂತ್ರಿಗಳು ಗಡಿ ವಿಚಾರದಲ್ಲಿ ಖ್ಯಾತೆ ತೆಗೆದು ಜನರಲ್ಲಿ ಗೊಂದಲ ಸೃಷ್ಠಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಈ ನಡೆ ಖಂಡನೀಯ ಎಂದರು.

ಬಂದ್ : ಸಿಎಂ ಎಚ್ಚರಿಕೆ
ರಾಜ್ಯದಲ್ಲಿರುವ ಮರಾಠಿಗರು ಕನ್ನಡಿಗರೆ. ರಾಜ್ಯದಲ್ಲಿರುವ ಮರಾಠಿಗರ ಅಭಿವೃದ್ಧಿಗಾಗಿ ಪ್ರಾಧಿಕಾರ ಮಾಡಿದ್ದೇವೆ. ಮರಾಠಿಗಳು ಕಟ್ಟಾ ಹಿಂದುತ್ವವಾದಿಗಳು. ಸುಮ್ಮನೆ ಬಂದ್ ಹೆಸರಿನಲ್ಲಿ ಗೊಂದಲ ಸೃಷ್ಠಿಸುವ ಕೆಲಸ ಮಾಡಬೇಡಿ. ಒಂದು ವೇಳೆ ಸರ್ಕಾರದ ಆದೇಶ ಉಲ್ಲಂಘಿಸಿ, ಬಂದ್ ಮಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬಂದ್ ಕರೆ ನೀಡಿರುವವರಿಗೆ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ, ಬಂದ್ ಬೇಡ. ಮರಾಠ ಅಭಿವೃದ್ಧಿಗಾಗಿ ಪ್ರಾಧಿಕಾರ ಮಾಡಿದ್ದೇವೆಯೇ ವಿನಃ ಬೇರೆ ಕಾರಣಕ್ಕಾಗಿ ಅಲ್ಲ ಎಂದರು.
ರಾಜ್ಯದಲ್ಲಿರುವ ಮರಾಠಿಗರ ಅಭಿವೃದ್ಧಿಗೆ ಪ್ರಾಧಿಕಾರ ಮಾಡಿದ್ದೇವೆ. ಇದರ ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕು. ಗೊಂದಲ ಸೃಷ್ಠಿಸುವ ಕೆಲಸ ಬೇಡ ಎಂದರು.
ಡಿಸೆಂಬರ್ ೫ ರಂದು ಬಂದ್ ಮಾಡುವ ಅಗತ್ಯವಿಲ್ಲ. ಬಂದ್ ಮಾಡುವಂತಹ ತೀರ್ಮಾನವನ್ನು ಸರ್ಕಾರ ಕೈಗೊಂಡಿಲ್ಲ. ಮರಾಠರು ಕನ್ನಡಿಗರೆ. ಬೆಳಗಾವಿಯ ವಿಶ್ವ ಕನ್ನಡ ಸಮ್ಮೇಳನದಲ್ಲೂ ಅವರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಆ ಜನಾಂಗದ ಅಭಿವೃದ್ಧಿಗಾಗಿ ಪ್ರಾಧಿಕಾರ ಮಾಡಿದ್ದೇವೆ. ಭಾಷೆ ಅಭಿವೃದ್ಧಿಗಾಗಿ ಅಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಬಲವಂತದಿಂದ ಬಂದ್ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ಇದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದರು.