ಗಡಿ ಕಗ್ಗಂಟು ಭಾರತ-ಚೀನಾ ನಡುವೆ 8ನೇ ಸುತ್ತಿನ ಮಾತುಕತೆ

ನವದೆಹಲಿ, ನ 6- ಪೂರ್ವ ಲಡಾಕ್ ನಲ್ಲಿ ನಿಯೋಜನೆಗೊಂಡಿರುವ ಸೇನಾ ವಾಪಸ್ಸಾತಿ ಹಾಗೂ ಗಡಿ ಬಿಕ್ಕಟ್ಟು ಕುರಿತಂತೆ ಇಂದು ಭಾರತ ಮತ್ತು ಚೀನಾ ನಡುವಣ ಎಂಟನೇ ಸುತ್ತಿನ ಮಾತುಕತೆ ಇಂದು ನಡೆಯಿತು.
ಘರ್ಷಣೆ ನಡೆದ ಎಲ್ಲ ಪ್ರದೇಶಗಳಿಂದ ಉಭಯ ದೇಶಗಳ ಸೈನಿಕರು ವಾಪಸ್ ಕರೆಸಿಕೊಳ್ಳುವ ಮಾರ್ಗಸೂಚಿಯನ್ನು ರಚಿಸುವ ಉದ್ದೇಶದೊಂದಿಗೆ ಹಿರಿಯ ಸೇನಾಧಿಕಾರಿಗಳ ಮಟ್ಟದಲ್ಲಿ ಮಾತುಕತೆ ನಡೆಯಿತು ಎಂದು ಮೂಲಗಳು ತಿಳಿಸಿವೆ.
ಪೂರ್ವಲಡಾಕ್ ನ ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ನಡೆದ ಉನ್ನತಮಟ್ಟದ ಮಾತುಕತೆಯಲ್ಲಿ‌ ಲೇಹ್ ನಲ್ಲಿ ನಿಯೋಜನೆ ಗೊಂಡಿರುವ 14ನೇ ಕಾರ್ಪ್ಸ್ ನ ನೂತನ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ನೇತೃತ್ವದ ನಿಯೋಗವು ‌ಭಾರತದ ಪರ ಭಾಗವಹಿಸಿತ್ತು.
ಅ12ರಂದು ಏಳನೇ ಸುತ್ತಿನ ಮಾತುಕತೆ ನಡೆದಿತ್ತು. ಈ ವೇಳೆ ಪಾಂಗಾಂಗ್ ಸರೋವರದ ಸುತ್ತಮುತ್ತಲಿರುವ ಪರ್ವತ ಪ್ರದೇಶಗಳಿಂದ ಭಾರತೀಯ ಸೈನಿಕರು ಹಿಂದೆ ಸರಿಯಬೇಕೆಂದು ಚೀನಾ ಒತ್ತಾಯಿಸಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಭಾರತ, ಘರ್ಷಣೆ ಸಂಭವಿಸಬಹುದಾದ ಪ್ರದೇಶಗಳಿಂದ ಎರಡೂ ದೇಶಗಳ ಸೈನಿಕರು ಏಕಕಾಲದಲ್ಲಿ ಹಿಂದೆಸರಿಯಬೇಕು ಎಂದು ಪ್ರತಿಪಾದಿಸಿತ್ತು. ಮಾತುಕತೆ ಮುಖಾಂತರವೇ ಒಮ್ಮತವಾದ ಪರಿಹಾರ ಕಂಡುಕೊಳ್ಳಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು.

ಗಡಿ ಬಿಕ್ಕಟ್ಟಿನ ಬಳಿಕ ಭಾರತ ಪೂರ್ವ ಲಡಾಖ್‌ ನಲ್ಲಿ 50 ಸಾವಿರಕ್ಕೂ ಅಧಿಕ ಸೈನಿಕರನ್ನು ಭಾರತ ನಿಯೋಜಿಸಿದ್ದು, ಚೀನಾ ತನ್ನ ಗಡಿಯಲ್ಲಿ ಇಷ್ಟೇ ಪ್ರಮಾಣದ ಸೈನಿಕರನ್ನು ನಿಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.