ಗಡಿಯಲ್ಲಿ ತಪಾಸಣೆ ಮಾಡಲು ಸೂಚನೆ

ಚಿತ್ರದುರ್ಗ,ಏ.30: ರಾಜ್ಯದಲ್ಲಿ ಕೊರೋನಾ 2 ನೇ ಅಲೆ ಹೆಚ್ಚಾಗಿರುವುದರಿಂದ ಪೊಲೀಸ್ ಸಿಬ್ಬಂದಿ ಆರೋಗ್ಯ ಬಗ್ಗೆ ಕಾಳಜಿ ವಹಿಸುವಂತೆ ಅಧಿಕಾರಿಗಳ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.ನಗರದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿಗೆ ಇಂದು ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೋನಾ ಹೆಚ್ಚಾಗಿ ಬೆಳೆಯುತ್ತಿದೆ.ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಜನತಾ ಕರ್ಪ್ಯೂ ಜಾರಿ ಮಾಡಿದ್ದು, ಇದರಲ್ಲಿ ಪೊಲೀಸರ ಪಾತ್ರ ಬಹಳ ಮುಖ್ಯವಾಗಿದೆ. ಹಾಗಾಗಿ ಅವರ ಆರೋಗ್ಯದ ಬಗ್ಗೆಯೂ ಹೆಚ್ಚು ಕಾಳಜಿ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿಲಾಗಿದೆ ಎಂದರು.ರಾಜ್ಯದ ಗಡಿಯಲ್ಲಿ ತಪಾಸಣೆ ಮಾಡಲು ಸೂಚಿಸಿದ್ದು, ಅನಗತ್ಯ ಓಡಾಡುವವರಿಗೆ ಕಡಿವಾಣ ಹಾಕುವಂತೆ ತಿಳಿಸಿಲಾಗಿದೆ ಎಂದು ಹೇಳಿದ ಅವರು, ಹಾವೇರಿಯಲ್ಲಿ ಆಕ್ಸಿಜನ್ ಸ್ಟಾಕ್ ಯುನಿಟ್ ರಚನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಅದೇ ರೀತಿ ಮುಂಬರುವ ದಿನಗಳಲ್ಲಿ ಆಕ್ಸಿಜನ್ ಉತ್ಪಾದನೆ ಘಟಕ ಸ್ಥಾಪನೆ ಚಿಂತನೆ ನಡೆಸಲಾಗಿದೆ ಎಂದರು.ರಾಜ್ಯಕ್ಕೆ ಸುಮಾರು 1ಕೋಟಿ ಕೋವಿಡ್ ಲಸಿಕೆಗೆ ಆರ್ಡರ್ ಮಾಡಿದ್ದೇವೆ. ಲಸಿಕೆ ಬಂದ ಬಳಿಕ ಲಸಿಕೆ ವಿತರಣೆ  ದಿನಾಂಕ ಪ್ರಕಟಣೆ ಮಾಡಲಾಗುವುದು ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಈಗಾಗಲೇ ತಿಳಿಸಿದ್ದಾರೆ. ಅಲ್ಲದೆ ಇನ್ನೂ ಹೆಚ್ಚಿನ ಲಸಿಕೆಗೆ ಆದೇಶಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.ರಾಜ್ಯದಲ್ಲಿ 45ವರ್ಷ ಮೇಲ್ಪಟ್ಟವರಿಗೆ 2ನೇ ಡೋಸ್ ಲಸಿಕೆ ವಿತರಣೆ ಮುಂದುವರೆಯಲಿದ್ದು, 18ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಣೆ ಬಗ್ಗೆ ನಿಶ್ಚಿತ ದಿನಾಂಕವನ್ನು ಶೀಘ್ರವೇ  ಪ್ರಕಟಿಸಲಾಗುವುದು ಎಂದು ತಿಳಿಸಿದರು.ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಜಿ. ಹಾಜರಿದ್ದರು.