ಗಡಿಯಲ್ಲಿ ಡ್ರೋಣ್ ಪತ್ತೆ ಶೋಧ ಚುರುಕು

ಶ್ರೀನಗರ,ಜು.೧೭- ಜಮ್ಮು ಕಾಶ್ಮೀರದ ಸಾಂಬಾದಲ್ಲಿನ ಅಂತರಾಷ್ಟ್ರೀಯ ಗಡಿ ಭಾಗ ಬಳಿ ಡ್ರೋಣ್ ಪತ್ತೆಯಾದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯ ಮುಂದುವರಿದಿದೆ. ಪಾಕಿಸ್ತಾನದ ಮೂಲಕ ಭಾರತದ ವಾಯುಪ್ರದೇಶಕ್ಕೆ ಡ್ರೋನ್‌ಗಳು ಪ್ರವೇಶಿಸುತ್ತಿರುವ ಘಟನೆಗಳು ಮೇಲಿಂದ ಮೇಲೆ ಗಡಿ ಪ್ರದೇಶಗಳಿಂದ ವರದಿಯಾಗುತ್ತಲೇ ಇದ್ದು ಆತಂಕ ಸೃಷ್ಟಿಸಿದೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತೊಂದು ಡ್ರೋಣ್ ಸಾಂಬಾ ಅಂತರರಾಷ್ಟ್ರೀಯ ಗಡಿಯ ಬಳಿ ಹಾರುತ್ತಿರುವುದನ್ನು ಗುರುತಿಸಿದ್ದು ಕಳೆದ ರಾತ್ರಿ ಭದ್ರತಾ ಪಡೆಗಳು ಡ್ರೋಣ್ ಚಲನೆ ಪತ್ತೆಹಚ್ಚಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ತಡರಾತ್ರಿ ಮಂಗು ಚಾಕ್ ಗ್ರಾಮದ ಸಾಂಬಾ ಗ್ರಾಮಸ್ಥರು ಈ ಪ್ರದೇಶದಲ್ಲಿ ಡ್ರೋಣ್ ಅನ್ನು ಗುರುತಿಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಪಡೆಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಜುಲೈ ೪ ರಂದು ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯಲ್ಲಿರುವ ರಾಜ್‌ಪುರ ಪ್ರದೇಶದ ಗ್ರಾಮಸ್ಥರು ಪಾಕಿಸ್ತಾನದ ಡ್ರೋಣ್ ಅನ್ನು ಗುರುತಿಸಿದ್ದಾರೆ ಎಂದು ಹೇಳಲಾಗಿದೆ.
ರಾಜ್‌ಪುರ ಪ್ರದೇಶದಲ್ಲಿ ಅವರು ಡ್ರೋಣ್ ಅನ್ನು ನೋಡಿದ್ದಾರೆ. “ತರುವಾಯ,ಸಾಂಬಾ ಪ್ರದೇಶದಲ್ಲಿ ಹುಡುಕಾಟ ಪ್ರಾರಂಭಿಸಿದ್ದಾರೆ. ಬೆಳಿಗ್ಗೆ ೫ ಗಂಟೆಯ ಸುಮಾರಿಗೆ ಕಾರ್ಯಾಚರಣೆ ಮತ್ತು ಪ್ರದೇಶವನ್ನು ಸ್ಕ್ಯಾನ್ ಮಾಡಲು ಡ್ರೋಣ್‌ಗಳನ್ನು ಬಳಸಲಾಯಿತು ಆದರೆ ಏನೂ ಕಂಡುಬಂದಿಲ್ಲ” ಎಂದು ಅವರು ಹೇಳಿದರು.
ಈ ವರ್ಷದ ಆರಂಭದಲ್ಲಿ ಮೇ ತಿಂಗಳಲ್ಲಿ, ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಏಳು ಜಿಗುಟಾದ ಅಥವಾ ಮ್ಯಾಗ್ನೆಟಿಕ್ ಬಾಂಬ್‌ಗಳು ಮತ್ತು ಏಳುಅಂಡರ್ ಬ್ಯಾರೆಲ್ ಗ್ರೆನೇಡ್ ಲಾಂಚರ್ಸ್ ಹೊತ್ತೊಯ್ಯುತ್ತಿದ್ದ ಪಾಕಿಸ್ತಾನಿ ಡ್ರೋಣ್ ಅನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು.