ಗಡಿಭಾಗದ ಮತಗಟ್ಟೆಗಳು, ಚೆಕ್ ಪೋಸ್ಟ್ ಗಳಿಗೆ ಡಿಸಿ ಭೇಟಿ

ಗೌರಿಬಿದನೂರು.ಮಾ೧೨:ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಕಾರಣ ತಾಲ್ಲೂಕಿನ ಗಡಿಭಾಗದಲ್ಲಿನ ಸೂಕ್ಷ್ಮ ಮತಗಟ್ಟೆಗಳು ಮತ್ತು ಚೆಕ್ ಪೋಸ್ಟ್ ಗಳಿಗೆ ಭಾನುವಾರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ನೇತೃತ್ವದ ಅಧಿಕಾರಿಗಳ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಾಲ್ಲೂಕಿನ ತೊಂಡೇಬಾವಿ ಹೋಬಳಿಯ ತಿಪ್ಪಗಾನಹಳ್ಳಿ ಬಳಿ ನಿರ್ಮಾಣ ಮಾಡಿರುವ ಚೆಕ್ ಪೋಸ್ಟ್ ಮತ್ತು ಸ್ಥಳೀಯ ಸಖಿ ಮತಗಟ್ಟೆ, ಅಲೀಪುರದಲ್ಲಿನ ಮತಗಟ್ಟೆಗಳು, ನಂತರ ಹಳೇ ಉಪ್ಪಾರಹಳ್ಳಿ, ಹೊಸೂರು ಮತಗಟ್ಟೆ, ಕೋಟಾಲದಿನ್ನೆ ಮತ್ತು ಭಕ್ತರಹಳ್ಳಿ ಚೆಕ್ ಪೋಸ್ಟ್ ಭೇಟಿ ನೀಡಿ ನಗರದ ಪ್ರವಾಸಿ ಮಂದಿರಕ್ಕೆ ತೆರಳಿದರು.
ನಂತರ ನೆರೆಯ ಆಂಧ್ರಪ್ರದೇಶದ ಗಡಿಭಾಗದಲ್ಲಿನ ಕುಡುಮಲಕುಂಟೆ ಚೆಕ್ ಪೋಸ್ಟ್ ನಗರಗೆರೆ ಹೋಬಳಿ ವ್ಯಾಪ್ತಿಯಲ್ಲಿನ ಮಲ್ಲೇನಹಳ್ಳಿ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಸ್ಥಳೀಯ ನಾಗರೀಕರಿಗೆ ಮತದಾನ ಮತ್ತು ಮತಗಟ್ಟೆಯ ಮಹತ್ವದ ಬಗ್ಗೆ ಜಿಲ್ಲಾಧಿಕಾರಿಗಳು ಜಾಗೃತಿ ಮೂಡಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಕಾರಣ ಜಿಲ್ಲೆಯ ಗಡಿಭಾಗವಾಗಿರುವ ತಾಲ್ಲೂಕಿನ ಗಡಿಭಾಗದಲ್ಲಿನ ಚೆಕ್ ಪೋಸ್ಟ್ ಗಳು ಮತ್ತು ಸೂಕ್ಷ್ಮ ಮತಗಟ್ಟೆಗಳಿಗೆ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. ಶಾಂತಿಯುತ ಮತದಾನ ಮತ್ತು ಚುನಾವಣಾ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತೀವ್ರ ಕಟ್ಟೆಚ್ಚರ ವಹಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನಾಗರೀಕರು ಚುನಾವಣಾ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸಹಕಾರ ನೀಡಬೇಕಾಗಿದೆ ಎಂದು ಹೇಳಿದರು.
ಈ ವೇಳೆ ಜಿ.ಪಂ ಸಿಇಒ ಪ್ರಕಾಶ್ ಜಿ.ನಿಟ್ಟಾಲಿ, ಪೊಲೀಸ್ ವರೀಷ್ಠಾಧಿಕಾರಿ ಡಿ.ಎಲ್.ನಾಗೇಶ್, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ತಹಶೀಲ್ದಾರ್ ಮಹೇಶ್ ಎಸ್ ಪತ್ರಿ, ಸೇರಿದಂತೆ ಕಂದಾಯ ಅಧಿಕಾರಿಗಳು ಮತ್ತು ಇತರರು ಭಾಗವಹಿಸಿದ್ದರು.