ಗಡಿಭಾಗದಲ್ಲೊಂದು ವಿಶೇಷ ಜಾತ್ರೆ!ಹುಡೇಂನಿಂದ  ಗೌಡರ ಕುದುರೆ ಹೋದರೆ ಚಿಕ್ಕುಂತಿಯಲ್ಲಿ ಕಂಪಳರಂಗಸ್ವಾಮಿ ಜಾತ್ರೆ !


(ಸಂಜೆವಾಣಿ ವಿಶೇಷ ವಾರ್ತೆ ) :
ಕೂಡ್ಲಿಗಿ. ಫೆ.17 :-  ಬುಡಕಟ್ಟು ಸಮುದಾಯದ  ಜಾತ್ರೆ ಎಂದರೆ ಬಲು ವಿಶೇಷ ಹಾಗೂ ಕಠೋರವಾದ ಕಟ್ಟುನಿಟ್ಟಿನ ಸಂಪ್ರದಾಯದಿಂದ ಕೂಡಿರುತ್ತವೆ ಇಂತಹ ವಿಶೇಷ ಸಂಪ್ರದಾಯದ ಜಾತ್ರೆಯ ವಿಶೇಷತೆ ಅರಿಯಲು ತಾಲೂಕಿನ ಹುಡೇಂ ನಲ್ಲಿ  ಗೌಡರ ಕುದುರೆ ಹೋದರೆ ಪಕ್ಕದ ಮೊಳಕಾಲ್ಮುರು  ತಾಲೂಕಿನ ಗಡಿಭಾಗದ ಚಿಕ್ಕ ಕುಮತಿ ಗ್ರಾಮದ ಕಂಪಳರಂಗ ಸ್ವಾಮಿ ಜಾತ್ರೆ ಸಾಗುವುದು ವಿಶೇಷವೆಂದು ಹೇಳಬಹುದಾಗಿದೆ.
ಹೀಗೆ ತಲೆ ತಲಾಂತರದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ಕೂಡ್ಲಿಗಿ ತಾಲೂಕಿನ ಹುಡೇಂ ಗ್ರಾಮದ ಈಶ್ವರಗೌಡ ಸೇರಿ ಅವರ ಸಹೋದರರ ಮುಂದಾಳತ್ವದಲ್ಲಿ ಗ್ರಾಮಸ್ಥರು ಕುದುರೆಯನ್ನು ಭಕ್ತಿಯಿಂದ ಮೊಳಕಾಲ್ಮೂರು ತಾಲೂಕಿನ ಚಿಕ್ಕುಂತಿ ಗ್ರಾಮಕ್ಕೆ ಶುಕ್ರವಾರ ಮೆರವಣಿಗೆಯಲ್ಲಿ ಕರೆದೊಯ್ದರು. ಇದು ಜಿಲ್ಲೆಗಳ ಹಾಗೂ ತಾಲೂಕುಗಳ ನಡುವಿನ ಭಾಂಧವ್ಯ ಹಾಗೂ ಸಾಮರಸ್ಯವನ್ನು ಬೆಸೆಯುವ ಜಾತ್ರೆ ಎಂದರೆ ತಪ್ಪಾಗದು.
ಹುಡೇಂ ಗ್ರಾಮದ ಗೌಡರ ಮನೆಯಿಂದ ಕುದುರೆಯನ್ನು ಶ್ರೀ ಕಂಪಳರಂಗಸ್ವಾಮಿ ದೇವಸ್ಥಾನದ ಬಳಿಗೆ ಕರೆತಂದು ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಗ್ರಾಮದ ಮಹಿಳೆಯರು, ಮಕ್ಕಳು, ಮುಖಂಡರು ಸೇರಿ ಎಲ್ಲರೂ ಪೂಜೆ ನೆರವೇರಿಸಿದರು. ಆನಂತರ, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಚಿಕ್ಕುಂತಿ ಗ್ರಾಮಕ್ಕೆ ಕುದುರೆಯನ್ನು ತಮಟೆ, ಉರುಮೆ ವಾದ್ಯಗಳೊಂದಿಗೆ ಅದ್ದೂರಿ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಕುದುರೆ ಸಾಗುವ ದಾರಿಯಲ್ಲಿ ಹುಡೇಂ, ತಾಯಕನಹಳ್ಳಿ, ಚಿಕ್ಕೋಬನಹಳ್ಳಿ ಸೇರಿ ನಾನಾ ಕಡೆ ಭಕ್ತರು ಕುದುರೆಗೆ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸಿದರು. ಈ ಸಂದರ್ಭದಲ್ಲಿ ಗೌಡರ ವಂಶದ ಈಶ್ವರಗೌಡ, ಮಂಜುನಾಥ ಗೌಡ, ಬಸವರಾಜ ಗೌಡ, ಗ್ರಾಪಂ ಅಧ್ಯಕ್ಷ ಬಿ.ರಾಮಚಂದ್ರಪ್ಪ, ಮುಖಂಡರಾದ ಕೆ.ರಾಜಶೇಖರಪ್ಪ, ಜರುಗು ಬೋರಯ್ಯ, ಕೋಣನವರ ಮಲ್ಲಿಕಾರ್ಜುನ, ಪಾಲಯ್ಯನಕೋಟೆ ಮಂಜುನಾಥ, ಜೊಳ್ಳಜ್ಜರ ಕೆಂಗಣ್ಣ, ದಾಸರೋಬಯ್ಯ, ಪರ‍್ರಪ್ಪರ ಶರಣಪ್ಪ, ತುಡುಮ ಗುರುರಾಜ, ಗ್ರಾಪಂ ಸದಸ್ಯ ಅಜ್ಜಣ್ಣ, ಯಲ್ಲಪ್ಪ, ತಾಪಂ ಮಾಜಿ ಸದಸ್ಯ ಪಾಪನಾಯಕ, ಚಿನ್ನಯ್ಯ, ಎಚ್.ಬಿ.ರುದ್ರಪ್ಪ, ದೇವರಾಜ, ಕಳ್ಳಜ್ಜರ ಮಲ್ಲಿಕಾರ್ಜುನ ಸೇರಿ ಗ್ರಾಮಸ್ಥರು ಇದ್ದರು.
ಪುರಾತನದಿಂದ ನಡೆದ ಸಂಪ್ರದಾಯ
ಕೂಡ್ಲಿಗಿ ತಾಲೂಕಿನ ಹುಡೇಂ ಗ್ರಾಮದ ಗೌಡರ ಮನೆಯಿಂದ ಕುದುರೆಯು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಚಿಕ್ಕುಂತಿ (ಕಂಪಳದೇವರಹಟ್ಟಿ) ಗ್ರಾಮಕ್ಕೆ ವರ್ಷಕ್ಕೊಮ್ಮೆ ಹೊರಡುವುದು ಪುರಾತನದಿಂದ ನಡೆದಿರುವ ಸಂಪ್ರದಾಯ. ಹುಡೇಂ ಗ್ರಾಮದ ಗೌಡರ ಮನೆಯಿಂದ ಹೊರಡುವ ಕುದುರೆಗೆ ತುಡುಮನವರ ಮನೆಯಿಂದ ಬಂಗಾರದ ಆಭರಣಗಳಿಂದ ಸಿಂಗಾರಗೊಳಿಸಲಾಗುತ್ತಿತ್ತು. ಆ ವೈಭವವನ್ನು ನೋಡಲು ಸುತ್ತಮುತ್ತಲ ಹಳ್ಳಿಗಳಿಂದ ಸಾಕಷ್ಟು ಜನರು ಆಗಮಿಸುತ್ತಿದ್ದರು. ಆಗ ನಾವಿನ್ನೂ ಚಿಕ್ಕವರಿದ್ದೆವು ಎಂದು ಗ್ರಾಮದ ಅನೇಕ ಹಿರಿಯರು ನೆನಪಿನ ಮೆಲುಕು ಕಾಹಿದರು. ಕೂಡ್ಲಿಗಿ ತಾಲೂಕಿನ ಹುಡೇಂ ಗ್ರಾಮದಿಂದ ಕುದುರೆ ತೆರಳಿದರೆ ಮಾತ್ರ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಚಿಕ್ಕುಂತಿ ಗ್ರಾಮದಲ್ಲಿ ಬುಡಕಟ್ಟು ಆಚರಣೆಯ ಶ್ರೀ ಕಂಪಳರಂಗಸ್ವಾಮಿ ದೇವರ ಜಾತ್ರೆಗೆ ಚಾಲನೆ ಸಿಗುತ್ತದೆ. ಆ ನಂತರವೇ ದೇವರ ಎತ್ತುಗಳ ಓಟ, ಪೂಜೆ, ಮಣೇವು ಸೇರಿ 3 ದಿನಗಳ ಕಾಲ ಜಾತ್ರೆ ನಡೆಯಲಿದೆ. ಈ ಜಾತ್ರೆಯಲ್ಲಿ ಭಾಗವಹಿಸುವವರು ಮಾಂಸಹಾರವನ್ನು  ಸೇವಿಸದೆ ಇರುವುದು ವಿಶೇಷವೆಂದು ಹೇಳಬಹುದಾಗಿದೆ.
 ಹುಡೇಂನಿಂದ ಸಿಂಗಾರಗೊಂಡ ಕುದುರೆ ಲಕ್ಷ್ಮಿಯಂತೆ  ಕಂಪಳದೇವರಹಟ್ಟಿಗೆ ಹೋಗುತ್ತದೆ. ಆದರೆ, ಅಲ್ಲಿ ಪೂಜೆಯ ನಂತರ ಸಿಂಗರಿಸಿದ ಆಭರಣಗಳನ್ನು ಬಿಚ್ಚಿಟ್ಟು ಏನೂ ಇಲ್ಲದಂತೆ ವಾಪಸ್ ಕುದುರೆಯನ್ನು ಕರೆತರುವುದು ಶುಭ ಸೂಚಕವಾಗಲಾರದು. ಹಿರಿಯರು ಈ ಬಗ್ಗೆ ಗಮನಹರಿಸಿ ಸಿಂಗಾರಗೊಂಡ ಕುದುರೆಯನ್ನೇ ಮತ್ತೆ ವಾಪಸ್ ಕರೆತಂದು ಆಭರಣಗಳನ್ನು ಬಿಚ್ಚಿಡುವಂತಾಗಲಿ ಎನ್ನುತ್ತಾರೆ ಹುಡೇಂ ಗ್ರಾಮದ ಚಿನ್ನಯ್ಯ ಹಾಗೂ  ಇತರರು.