ಗಡಿಭಾಗದಲ್ಲಿ ನಡೆದ ಕನ್ನಡಪರ ಕೆಲಸಗಳೆ ಗೆಲುವಿಗೆ ಶ್ರೀರಕ್ಷೆಯಾಗಲಿದೆ : ಚನ್ನಶೆಟ್ಟಿ

(ಸಂಜೆವಾಣಿ ವಾರ್ತೆ)
ಔರಾದ : ನ.9:ಗಡಿಯಲ್ಲಿ ಸುರೇಶ್ ಚೆನ್ನಶೆಟ್ಟಿ ಕನ್ನಡಕ್ಕೆ ಊರುಗೋಲಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ನಾವೆಲ್ಲರೂ ಅವರ ಬೆಂಬಲಕ್ಕೆ ನಿಲ್ಲಬೇಕಿದೆ ಎಂದು ಕಸಾಪ ಆಜೀವ ಸದಸ್ಯ, ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ನಿರ್ದೇಶಕ ಬಂಡೆಪ್ಪ ಕಂಟೆ ತಿಳಿಸಿದರು.
ಪಟ್ಟಣದ ಕನಕ ಭವನದಲ್ಲಿ ಕಸಾಪ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಈ ಹಿಂದೆ ಬೀದರ್ ತಾಲೂಕು ಅಧ್ಯಕ್ಷರಾಗಿ, ಜಿಲ್ಲಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದ ಸುರೇಶ್ ಅವರಿಗೆ ಗಡಿಭಾಗದಲ್ಲಿನ ಕನ್ನಡ ಸ್ಥಿತಿಗತಿ ಕುರಿತು ಚೆನ್ನಾಗಿ ಮಾಹಿತಿಯಿದ್ದು, ಮುಂದಾಲೋಚನೆಯಿಂದ ಹೆಜ್ಜೆ ಇಡುವ ಚೆನ್ನಶೆಟ್ಟಿ ಅವರಿಗೆ ಮತ ಚಲಾಯಿಸುವಂತೆ ಕರೆ ನೀಡಿದರು.
ಹಿರಿಯ ವೈದ್ಯ ಡಾ. ಕಲ್ಲಪ್ಪ ಉಪ್ಪೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರಿಯಾಶೀಲತೆಗೆ ಮತ್ತೊಂದು ಹೆಸರೇ ಚೆನ್ನಶೆಟ್ಟಿ ಅವರ ಅವಧಿಯಲ್ಲಿ ಜಿಲ್ಲೆಯಾದ್ಯಂತ ಅನೇಕ ಕನ್ನಡ ಕಾರ್ಯಕ್ರಮಗಳು ಮಾಡಿದ್ದಾರೆ. ಔರಾದ್ ತಾಲೂಕಿನಲ್ಲಿಯೂ ಕೂಡ ಜಗನ್ನಾಥ ಮೂಲಗೆ ಅವರ ತಂಡ ಉತ್ತಮ ಕೆಲಸ ಮಾಡಿದ್ದು ಇಂದು ಚೆನ್ನಶೆಟ್ಟಿ ಅವರಿಗೆ ವರವಾಗಲಿದೆ ಎಂದು ಹೇಳಿದರು.
ಅಭ್ಯರ್ಥಿ ಸುರೇಶ್ ಚೆನ್ನಶೆಟ್ಟಿ ಮಾತನಾಡಿ, ಔರಾದ್ ತಾಲೂಕಿನಲ್ಲಿ ಕನ್ನಡವನ್ನು ಉಸಿರಾಗಿಸಿಕೊಂಡ ಅನೇಕ ಜನರು ನನಗೆ ಮಾರ್ಗದರ್ಶನ ಮಾಡಿದ್ದಾರೆ ಮುಂದೆಯು ಮಾಡಲಿದ್ದಾರೆ. ಜಗನ್ನಾಥ ಮೂಲಗೆ ಸಾರಥ್ಯದ ತಂಡ ಮಾಡಿರುವ ರಚನಾತ್ಮಕ ಕೆಲಸಗಳೇ ನನಗೆ ಚುನಾವಣೆಗೆ ಶ್ರೀರಕ್ಷೆಯಾಗಲಿದ್ದು, ಮುಂದೆಯು ಉತ್ತಮ ಕೆಲಸ ಮಾಡಲು ಅವಕಾಶ ಕಲ್ಪಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ರಾಗಾ, ಪಂಡರಿ ಆಡೆ, ಗಜಾನನ ಮಳ್ಳಾ, ಜಗನ್ನಾಥ ಮೂಲಗೆ, ಬಿಎಂ ಅಮರವಾಡಿ, ಡಾ. ಶಾಲಿವಾನ ಉದಗಿರೆ, ಮಲ್ಲಿಕಾರ್ಜುನ ಸ್ವಾಮಿ, ಗುರುನಾಥ ದೇಶಮುಖ, ಬಸವರಾಜ ಮಸ್ಕಲೆ, ಶಿವಶಂಕರ ಟೋಕರೆ, ಸುರೇಶ ಪಾಂಡ್ರೆ, ಸೂರ್ಯಕಾಂತ ಕಳಸೆ, ಅಮೃತರಾವ ಬಿರಾದಾರ್, ಖಂಡೋಬಾ ಕಂಗಟೆ, ವಿರೇಶ ಅಲಮಾಜೆ, ಸಂದೀಪ ಪಾಟೀಲ್, ಜಗನ್ನಾಥ ದೇಶಮುಖ, ಆನಂದ ದ್ಯಾಡೆ, ಜ್ಞಾನೇಶ್ವರ ವಾಡೆಕರ್, ಅನೀಲ, ಪ್ರಕಾಶ ಸೇರಿದಂತೆ ಇನ್ನಿತರರಿದ್ದರು.
ಹಳ್ಳಿಗಳಿಗೆ ತೆರಳಿ ಮತಯಾಚನೆ :ಭಾನುವಾರ ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಸುರೇಶ ಚೆನ್ನಶೆಟ್ಟಿ ಕಸಾಪ ಸದಸ್ಯರ ಮನೆಗಳಿಗೆ ತೆರಳಿ ಮತಯಾಚಿಸಿದರು. ತಾಲೂಕಿನ ನಾಗಮಾರಪಳ್ಳಿ, ಯನಗುಂದಾ, ಇಟಗ್ಯಾಳ ಸೇರಿದಂತೆ ವಿವಿಧ ಗ್ರಾಮಗಳ ಆಜೀವ ಸದಸ್ಯರ ಮನೆಗಳಿಗೆ ತೆರಳಿ ಮತಯಾಚನೆ ಮಾಡಿದರು.