ಗಡಿಭಾಗದಲ್ಲಿ ಕನ್ನಡ ಉಳಿಸಿ ಬೆಳೆಸಿದ ಚೆನ್ನಬಸವ ಪಟ್ಟದೇವರು

ಔರಾದ :ಎ.23: ತಾಲೂಕಿನ ಸಂತಪೂರನ ಶ್ರೀ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಶತಾಯುಷಿ ಲಿಂಗೈಕ್ಯ ಡಾ. ಚನ್ನಬಸವ ಪಟ್ಟದೇವರ 22ನೇ ಸ್ಮರಣೋತ್ಸವ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸುಭಾಸ್ ಚಂದ್ರ ಭೋಸ್ ಪ್ರೌಢಶಾಲೆ ಸಂಪನ್ಮೂಲ ಶಿಕ್ಷಕ ಮನೋಹರ್ ಬಿರಾದರ್ ಅವರು ಮಾತನಾಡಿ ಡಾ. ಚನ್ನಬಸವ ಪಟ್ಟದೇವರು ನಿಜಾಮರ ಆಳ್ವಿಕೆ ಕಾಲದಲ್ಲಿ ಹೊರಗೆ ಉರ್ದು ಬೋರ್ಡ್ ಹಾಕಿ ಒಳಗೆ ಕನ್ನಡ ಕಲಿಸಿದ ಮಹಾನ ಪುರುಷರು ಈ ಭಾಗದಲ್ಲಿ ಕನ್ನಡ ಉಳಿದುಕೊಂಡಿದೆ ಎಂದರೆ ಅದಕ್ಕೆ ಪೂಜ್ಯರು ಕಾರಣೀಭೂತರು ಭಾಲ್ಕಿ ಹಿರೇಮಠ ಕನ್ನಡವನ್ನು ಉಳಿಸಿ ಬೆಳೆಸಿದ ಮಠ, ಕನ್ನಡದ ಮಠ ಎಂದೇ ಖ್ಯಾತಿ ಪಡೆದಿದೆ. ಕಲ್ಯಾಣ ಕರ್ನಾಟಕ ಭಾಗಕ್ಕಾಗಿ ಡಾ. ಚನ್ನಬಸವ ಪಟ್ಟದೇವರು ಶ್ರಮ ಶ್ಲಾಘನೀಯವಾದದ್ದು ಎಂದು ಹೇಳಿದರು.

ಕಾಲೇಜು ಪ್ರಾಂಶುಪಾಲ ನವಿಲ್ ಕುಮಾರ್ ಉತ್ಕಾರ ಅವರು ಮಾತನಾಡಿ ಕಲ್ಯಾಣ ಕರ್ನಾಟಕ ಭಾಗದ ನಡೆದಾಡುವ ದೇವರು ಡಾ. ಚನ್ನಬಸವ ಪಟ್ಟದೇವರು 12ನೇ ಶತಮಾನದ ಶರಣರಂತೆ ನುಡಿದಂತೆ ನಡೆದ ಮಹಾನ ದಾರ್ಶನಿಕರು. ಶತಾಯುಷಿ ಯುಗಪುರುಷ ಡಾ. ಚನ್ನಬಸವ ಪಟ್ಟದೇವರ ಶ್ರಮ ಈ ಭಾಗಕ್ಕೆ ಅಪಾರವಾದದ್ದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂತಪೂರ ಅನುಭವ ಮಂಟಪದ ಅಧ್ಯಕ್ಷರ ಬಸವರಾಜ್ ಬಿರಾದಾರ, ಶಿವಕುಮಾರ್ ಹಿರೇಮಠ್ ಹಾಗೂ ಇತರರಿದ್ದರು.