ಗಡಿನಾಡ ಜಾನಪದ ಸಂಗೀತೋತ್ಸವ

ಕೋಲಾರ ಆ, ೨೧ : ಜಾನಪದ ಹಾಗೂ ಶಾಸ್ತ್ರೀಯ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳು ಮನೋರಂಜನೆ ಹಾಗೂ ಮಾನಸಿಕ ನೆಮ್ಮದಿ ನೀಡುತ್ತವೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಜಿ.ವಿ. ಮಂಜುನಾಥ್ ತಿಳಿಸಿದರು
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಗಾನಸುಧಾ ಸಾಂಸ್ಕೃತಿಕ ಕಲಾ ಸಂಸ್ಥೆ ಜಯಮಂಗಲ ಗ್ರಾಮ, ಮಾಲೂರು ತಾಲ್ಲೂಕು ಇವರ ಸಹಯೋಗದಲ್ಲಿ ಆಲಂಬಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಡಿನಾಡು ಜಾನಪದ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗಡಿನಾಡಿನಲ್ಲಿ ನೆಲ, ಜಲ, ಭಾಷೆ, ಕನ್ನಡವನ್ನು ಉಳಿಸುವ ಮೂಲಕ ಮನುಷ್ಯನಿಗೆ ಮಾನಸಿಕ ಹಾಗೂ ಆರೋಗ್ಯವನ್ನು ನೀಡುವ ಕಾರ್ಯಕ್ರಮವನ್ನು ಆಯೋಜನೆ ಮಾಡಿದ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ಕೆ.ವೆಂಕಟೇಶಪ್ಪ ಮಾತನಾಡಿ ಜಾನಪದ ಕಲೆಗಳನ್ನು ಗಳಲ್ಲಿಗಳಲ್ಲಿ ಹಮ್ಮಿಕೊಳ್ಳಲು ಸಹಕಾರ ನೀಡುತ್ತಿರುವ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯ ಶ್ಲಾಘನೀಯವಾದುದು. ಇದರಿಂದ ಕಲಾವಿದರು ತಮ್ಮ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾರಿಕ ಮತ್ತು ತಂಡದಿಂದ ಭರತನಾಟ್ಯ, ಬೇತಮಂಗಲ ಸಿ.ನಾರಾಯಣಸ್ವಾಮಿ ರವರಿಂದ ಶಾಸ್ತ್ರೀಯ ಸಂಗೀತ, ದೊಡ್ಡಮಲ್ಲೆ ರವಿ ಮತ್ತು ತಂಡದಿಂದ ಸುಗಮ ಸಂಗೀತ, ಈನೆಲ ಈಜಲ ವೆಂಕಟಾಚಲಪತಿ ರವರಿಂದ ಜಾನಪದ ಗಾಯನ, ಯಲ್ಲಪ್ಪ ಮತ್ತು ತಂಡದಿಂದ ಕ್ರಾಂತಿ ಗೀತೆಗಳನ್ನು ನಡೆಸಿಕೊಟ್ಟರು.
ವಾದ್ಯ ಸಹಕಾರವನ್ನು ತಬಲ ವಿದ್ವಾನ್ ಸಿ.ಸೋಮಶೇಖರ್, ಎನ್.ವೆಂಕಟೇಶ್, ಮುನಿಯಲ್ಲಪ್ಪ, ವೈಯಲಿನ್ ವಾದನ ಪಿ.ಜೆ. ಬ್ರಹ್ಮಾಚಾರಿ, ಮೃದಂಗ ವಾದನದಲ್ಲಿ ಹೊಸಕೋಟೆ ಶಂಕರ್ ಭಾಗವಹಿಸಿದ್ದರು ಎಂದು ಕಾರ್ಯಕ್ರಮದ ರೂವಾರಿ ಗಾನಸುಧಾ ಸಾಂಸ್ಕೃತಿಕ ಕಲಾ ಸಂಸ್ಥೆಯ ಅಧ್ಯಕ್ಷ ಕೆ.ಗೌತಮ್ ತಿಳಿಸಿದ್ದಾರೆ.