ಗಡಿನಾಡು ಸಾಹಿತ್ಯ ಸಮ್ಮೇಳನ: ಸ್ವಾಗತ ಸಮಿತಿ ಅಧ್ಯಕ್ಷರಾಗಿ ಹರ್ಷಾನಂದ ಗುತ್ತೇದಾರ ಆಯ್ಕೆ

ಕಲಬುರಗಿ: ನ.8: ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಗಳಿಸಿರುವ ವಿಶ್ವಜ್ಯೋತಿ ಪ್ರತಿಷ್ಠಾನವು ನವೆಂಬರ್ ಮಾಸಾಂತ್ಯಕ್ಕೆ ಆಳಂದ ತಾಲೂಕಿನ ಗಡಿ ಭಾಗವಾದ ಖಜೂರಿಯಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿರುವ ಒಂದು ದಿನದ ಜಿಲ್ಲಾ ಮಟ್ಟದ `ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡ ಜಿಲ್ಲಾ ಪಂಚಾಯಿತಿ ಸದಸ್ಯ ಹರ್ಷಾನಂದ್ ಸುಭಾಷ್ ಗುತ್ತೇದಾರ್ ಅವರನ್ನು ವಿಶೇಷವಾಗಿ ಗೌರವಿಸಿ, ಅಧಿಕೃತ ಆಹ್ವಾನ ನೀಡಲಾಯಿತು.
ಈ ಸಂದರ್ಭದಲ್ಲಿ ಗುತ್ತೇದಾರ್ ಅವರು ಮಾತನಾಡಿ, ಕರ್ನಾಟಕ-ಮಹಾರಾಷ್ಟ್ರ ಗಡಿನಾಡ ಜನರ ನಡುವೆ ಭಾಷೆ ಹಾಗೂ ಸಾಂಸ್ಕøತಿಕವಾಗಿ ಸಾಮರಸ್ಯವಾದ ವಾತಾವರಣವಿದ್ದು, ಇಲ್ಲಿನ ಕನ್ನಡಿಗರನ್ನು ಒಗ್ಗೂಡಿಸಿ, ಮಾತೃಭಾಷಾಭಿಮಾನ ಮೂಡಿಸುವ ನಿಟ್ಟಿನಲ್ಲಿ ವಿಶಿಷ್ಟ ರೀತಿಯಲ್ಲಿ ಈ ಗಡಿನಾಡು ಸಮ್ಮೇಳನ ನಡೆಸಲು ಸರ್ವ ಸಹಕಾರ ನೀಡುವುದಾಗಿ ಹೇಳಿದ ಅವರು, ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆಯನ್ನು ಇನ್ನಷ್ಟು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಅನೇಕ ಹಿರಿಯ-ಕಿರಿಯ ಸಾಹಿತಿಗಳನ್ನು ಸಮ್ಮೀಲನಗೊಳ್ಳುವ ನಿಟ್ಟಿನಲ್ಲಿ ಸಮ್ಮೇಳನ ರೂಪುಗೊಳ್ಳಲಿದೆ ಎಂದರು.
ಪ್ರತಿಷ್ಠಾನ ಸಂಸ್ಥಾಪಕ ವಿಜಯಕುಮಾರ್ ತೇಗಲತಿಪ್ಪಿ ಅವರು ಮಾತನಾಡಿ, ಕನ್ನಡ ನಾಡಿನ ನೆಲ, ಜಲ, ಭಾಷೆ ಸೇರಿದಂತೆ ಗಡಿ ಭಾಗದ ಕನ್ನಡಿಗರ ರಕ್ಷಣೆಗೆ ಪ್ರತಿಷ್ಠಾನ ಬದ್ಧವಾಗಿದೆ. ಕನ್ನಡ ಭಾಷೆ ಪ್ರತಿಯೊಬ್ಬರ ಮನೆ ಮತ್ತು ಮನದ ಭಾಷೆಯಾಗಬೇಕು. ಈ ನಿಟ್ಟಿನಲ್ಲಿ ಪ್ರತಿಷ್ಠಾನ ಆಯೋಜಿಸಿರುವ ಗಡಿನಾಡು ಸಮ್ಮೇಳನ ಸಾಮಾಜಿಕ ಜಾತ್ರೆಯನ್ನಾಗಿಸದೇ ಅನುಭವ ಮಂಟಪದ ರೀತಿಯಲ್ಲಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಗುರೂಜಿ ಪದವಿ ಕಾಲೇಜಿನ ಸಂಸ್ಥಾಪಕ ಕಲ್ಯಾಣಕುಮಾರ್ ಶೀಲವಂತ್, ಉಪನ್ಯಾಸಕ ಬಿ.ಎಸ್. ಮಾಲಿಪಾಟೀಲ್, ಸಾಹಿತ್ಯ ಪ್ರೇರಕರಾದ ಶಿವರಾಜ್ ಅಂಡಗಿ, ನಾಗೇಂದ್ರಪ್ಪ ಮಾಡ್ಯಾಳೆ, ಶರಣಬಸವ ಜಂಗಿನಮಠ್, ಮನೋಹರ್ ಪೊದ್ದಾರ್, ರವೀಂದ್ರಕುಮಾರ್ ಭಂಟನಳ್ಳಿ, ಸಂತೋಷ್ ಕುಂಬಾರ್, ಪ್ರಭುಲಿಂಗ್ ಮೂಲಗೆ, ಶರಣರಾಜ್ ಛಪ್ಪರಬಂದಿ, ಬಸವರಾಜ್ ಧೂಳಾಗುಂಡಿ, ವಿಶ್ವನಾಥ್ ತೊಟ್ನಳ್ಳಿ, ಶಿವಲಿಂಗ್ ಹಳಿಮನಿ, ಶಿವಾನಂದ್ ಮಠಪತಿ, ಶ್ರೀಕಾಂತ್ ಪಾಟೀಲ್ ತಿಳಗೂಳ್, ರಿತೀಶ್ ಚವ್ಹಾಣ್ ಮುಂತಾದವರು ಉಪಸ್ಥಿತರಿದ್ದರು.