ಗಡಿನಾಡು ಕನ್ನಡಿಗರಿಗಾಗಿ ಕೃಷ್ಣಕ್ಕೆ ಸಿಟಿ ಬಸ್

ರಾಯಚೂರು.ನ.05- ಗ‌ಡಿನಾಡು ಕನ್ನಡಿಗರ ಬೇಡಿಕೆಯಂತೆ ಇಂದಿನಿಂದ ರಾಯಚೂರಿನಿಂದ ತೆಲಂಗಾಣ ಕೃಷ್ಣಾಕ್ಕೆ ಸಿಟಿ ಬಸ್ ಸಂಚಾರ ಆರಂಭಿಸಲಾಯಿತು. ಇತ್ತೀಚಿಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಮತ್ತು ರಾಜ್ಯ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರಿಗೆ ಮನವಿ ನೀಡಿ, ವಿದ್ಯಾರ್ಥಿಗಳು ಗಡಿನಾಡು ಕನ್ನಡಿಗರ ಸಂಚಾರಕ್ಕಾಗಿ ಬಸ್ ಸೌಲಭ್ಯಕ್ಕಾಗಿ ಮನವಿ ಮಾಡಲಾಗಿತ್ತು. ಈ ಬೇಡಿಕೆಗೆ ಸ್ಪಂದಿಸಿದ ಸಚಿವರು ಇಂದಿನಿಂದ ಸಿಟಿ ಬಸ್ ಸಂಚಾರವನ್ನು ಆರಂಭಿಸಿದ್ದಾರೆ. ಶಕ್ತಿನಗರದಿಂದ 10 ಕಿ.ಮೀ., ರಾಯಚೂರಿನಿಂದ 25 ಕಿ.ಮೀ. ದೂರದಲ್ಲಿರುವ ಕೃಷ್ಣಾದಲ್ಲಿ ಗಡಿನಾಡು ಕನ್ನಡಿಗರು ವಾಸವಾಗಿದ್ದಾರೆ. ಅನೇಕ ವಿದ್ಯಾರ್ಥಿಗಳು ನಗರಕ್ಕೆ ಬಂದು ಹೋಗಲು ಸಮಸ್ಯೆಯಾಗಿತ್ತು ಎನ್ನುವ ಬಗ್ಗೆ ಸಚಿವರ ಗಮನ ಸೆಳೆಯಲಾಗಿತ್ತು.
ಇಂದು ಮುಂಜಾನೆ 8 ಗಂಟೆಯಿಂದ ಸಿಟಿ ಬಸ್ ಸಂಚಾರ ಆರಂಭಿಸಲಾಗಿದೆ. ಒಟ್ಟು ದಿನದಲ್ಲಿ ನಾಲ್ಕು ಸಲ ಈ ಬಸ್ ಸಂಚರಿಸಲಿದೆಂದು ಹೇಳಲಾಗುತ್ತಿದೆ. ಗಡಿನಾಡು ಕನ್ನಡಿಗರು ಬಸ್ ಸೌಲಭ್ಯ ಒದಗಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ ಅವರಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗಡಿನಾಡು ಕನ್ನಡಿಗರ ಕನ್ನಡ ಸಂಘದ ಗೌರವಾಧ್ಯಕ್ಷರಾದ ರಾಮಲಿಂಗಪ್ಪ ಕುಣಸಿ, ನಿಜಾಮುದ್ದೀನ್, ಅಮರ್ ದೀಕ್ಷಿತ್, ಮಹಾದೇವಪ್ಪ, ಡಿ.ಕೆ.ಕೃಷ್ಣಪ್ಪ, ಶಂಕರ ನಾಯಕ, ಶಕ್ತಿಸಿಂಗ್ ಠಾಕೂರ್, ನರಸಿಂಹಾಚಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.