ಗಡಿನಾಡಲ್ಲಿ ಅಮಿತ್ ಶಾ ಶಕ್ತಿ ಪ್ರದರ್ಶನ

ಬೆಂಗಳೂರು,ಫೆ.೨೩:ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪಣ ತೊಟ್ಟಿರುವ ಕೇಂದ್ರ ಬಿಜೆಪಿ ನಾಯಕರ ದಂಡು ರಾಜ್ಯಕ್ಕೆ ಭೇಟಿ ನೀಡಿ ಮತದಾರರ ಓಲೈಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಚುನಾವಣಾ ಚಾಣಕ್ಷರಾಗಿರುವ ಅಮಿತ್ ಶಾ, ಇಂದು ಬಳ್ಳಾರಿಯ ಸಂಡೂರಿಗೆ ಆಗಮಿಸಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳುವ ಮೂಲಕ ಶಕ್ತಿ ಪ್ರದರ್ಶನ ನಡೆಸಿದರು.
ಇತ್ತೀಚೆಗೆ ಅಭಿವೃದ್ಧಿ ಕಾರ್ಯಕ್ರಮಗಳ ಹೆಸರಲ್ಲಿ ಹಾಗೂ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಸಂದರ್ಭದಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಸರಣಿ ಭೇಟಿ ಕೈಗೊಂಡ ಬೆನ್ನಲ್ಲೆ ಇಂದು ಮಧ್ಯಾಹ್ನ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಗೊಳಿಸಿದೆ.
ಸಂಡೂರಿನ ಎಸ್‌ಆರ್‌ಎಸ್ ಮೈದಾನದಲ್ಲಿ ನಡೆಯಲಿರುವ ವಿಜಯಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಳ್ಳಲು ಅಮಿತ್ ಶಾ ದೆಹಲಿಯಿಂದ ಹುಬ್ಬಳ್ಳಿಗೆ ಅಗಮಿಸಿ ಅಲ್ಲಿಂದ ಸಂಡೂರಿಗೆ ತೆರಳಿದರು.
ಬಿಜೆಪಿ ಸಂಕಲ್ಪಯಾತ್ರೆಂiiಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ಜೋಷಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್, ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‌ಕುಮಾರ್ ಕಟೀಲು ಸೇರಿದಂತೆ ಇನ್ನಿತರ ಬಿಜೆಪಿ ಮುಖಂಡರು ಈ ಸಮಾವೇಶದಲ್ಲಿ ಪಾಲ್ಗೊಂಡು ಗಡಿನಾಡಿನಲ್ಲಿ ಶಕ್ತಿ ಪ್ರದರ್ಶಿಸಿದರು. ಕಲ್ಯಾಣ ಕರ್ನಾಟಕದ ಸುಮಾರು ಒಂದೂವರೆ ಲಕ್ಷ ಜನರು ಈ ಬಿಜೆಪಿ ಸಂಕಲ್ಪಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.
ಸಂಜೆ ಶಾ ಬೆಂಗಳೂರಿಗೆ
ಸಂಡೂರಿನಲ್ಲಿ ವಿಜಯಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡ ನಂತರ ಅಮಿತ್ ಶಾರವರು ಇಂದು ಸಂಜೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ವಿಧಾನಸಭಾ ಚುನಾವಣೆ ಸಂಬಂಧ ಪುರಭವನದಲ್ಲಿ ವಿವಿಧ ಕ್ಷೇತ್ರಗಳ ೫೦೦ ಮಂದಿ ಪ್ರಮುಖರೊಂದಿಗೆ ಭಾರತೀಯ ರಾಜಕೀಯ ೬೫ ವರ್ಷಗಳ ಸನ್ನಿವೇಶ ಮತ್ತು ಪ್ರಧಾನಿ ಮೋದಿ ನೇತೃತ್ವದಲ್ಲಿ ಮಾದರಿ ಬದಲಾವಣೆ ಕುರಿತು ಸಂವಾದ ನಡೆಸುವರು.
ಇದೇ ವೇಳೆ ಚುನಾವಣೆ ಸಿದ್ಧತೆ ಕುರಿತಂತೆ ರಾತ್ರಿ ಪಂಚತಾರಾ ಹೋಟೆಲ್‌ನಲ್ಲಿ ಬಿಜೆಪಿ ಮುಖಂಡರೊಂದಿಗೆ ಅಮಿತ್ ಶಾ ಮಹತ್ವದ ಚರ್ಚೆ ನಡೆಸಿ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಿಟ್ಟಿಸುವ ನಿಟ್ಟಿನಲ್ಲಿ ನಾಯಕರಿಗೆ ಟಾಸ್ಕ್ ನೀಡಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸುವ ಕುರಿತು ತಂತ್ರಗಾರಿಕೆ ರೂಪಿಸುವಂತೆಯೂ ರಾಜ್ಯಘಟಕದ ನಾಯಕರಿಗೆ ಅಮಿತ್ ಶಾ ಸೂಚನೆ ನೀಡಲಿದ್ದಾರೆ.
ಈ ಮಧ್ಯೆ ಫೆ. ೨೭ ರಂದು ಪ್ರಧಾನಿ ನರೇಂದ್ರಮೋದಿ ಅವರು ಶಿವಮೊಗ್ಗದ ಸೋಗಾನಿಯಲ್ಲಿ ನಿರ್ಮಿಸಲಾಗಿರುವ ವಿಮಾನನಿಲ್ದಾಣವನ್ನು ಸೇವೆಗೆ ಸಮರ್ಪಿಸಲು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಬೆಳಗಾವಿಗೂ ಭೇಟಿ ನೀಡಲಿರುವ ಮೋದಿ, ರೋಡ್ ಶೋ ನಡೆಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ.