ಗಡಿಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ಒತ್ತುಕೊಡಲಿ : ಡಾ. ರಾಜಕುಮಾರ ಹೆಬ್ಬಾಳೆ

ಬೀದರ:ಜು.9: ಗಡಿಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚು ಹೆಚ್ಚು ಒತ್ತು ಕೊಡಬೇಕಾಗಿದೆ. ಬೀದರ ಗಡಿಜಿಲ್ಲೆಯಾಗಿದ್ದರಿಂದ ಒಂದು ಕಡೆ ತೆಲಂಗಾಣ, ಇನ್ನೊಂದು ಕಡೆ ಮಹಾರಾಷ್ಟ್ರದ ಭಾಷಾ ಪ್ರಭಾವ ಹೇರಳವಾಗಿದೆ. ಆದ್ದರಿಂದ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಕನ್ನಡ ಭಾಷೆ, ಸಂಸ್ಕøತಿ, ಜನಪದ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ, ಅದನ್ನು ಸಂಘ-ಸಂಸ್ಥೆಗಳ ಮೂಲಕ ಸಾಕಾರಗೊಳಿಸಬೇಕೆಂದು ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ತಿಳಿಸಿದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಕನಕ ಕಲ್ಚರಲ್ ಫೌಂಡೇಶನ್ ಇವರುಗಳ ಸಹಯೋಗದಲ್ಲಿ ಬೀದರ ತಾಲೂಕಿನ ಮಲ್ಕಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ಗಡಿನಾಡು ಉತ್ಸವ – 2021-22 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಗಡಿಯಲ್ಲಿ ಶಾಲಾ ಕಾಲೇಜುಗಳು ಅನೇಕ ರೀತಿಯ ತೊಂದರೆಗಳನ್ನು ಅನುಭವಿಸುತ್ತಿವೆ. ಬಹುತೇಕ ಜನರು ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ವಾಸಿಸಿ ತಮ್ಮ ಮಕ್ಕಳಿಗೆ ಶಾಲೆ ಕಾಲೇಜಿಗೆ ಕಳುಹಿಸುವುದರಿಂದ ಗಡಿಭಾಗದ ಗ್ರಾಮಗಳಲ್ಲಿ ಸರ್ಕಾರಿ ಶಾಲೆಗಳು ಮೂಲಭೂತ ಸೌಕರ್ಯಗಳಿಲ್ಲದೆ ಸೊರಗುತ್ತಿವೆ. ಕನ್ನಡ ಶಿಕ್ಷಕರ ನೇಮಕಾತಿ, ಸಾಂಸ್ಕøತಿಕ ಭವನಗಳು, ಶೌಚಾಲಯಗಳು, ಗ್ರಂಥಾಲಯಗಳು, ರಸ್ತೆ, ಶುದ್ಧ ಕುಡಿಯುವ ನೀರು, ಕಾಲುವೆಗಳು, ಪರಿಶುದ್ಧವಾದ ಕಟ್ಟಡಗಳು, ಕೆಲವು ಶಾಲೆಗಳಿಗೆ ಡಿಜಿಟಲ್ ಟಚ್ ಸೇರಿದಂತೆ ಮುಂತಾದ ಸೌಕರ್ಯ ಸರ್ಕಾರ ಒದಗಿಸಿದರೆ ಗಡಿಗ್ರಾಮಗಳ ಅಭಿವೃದ್ಧಿಯಾಗುತ್ತದೆ ಎಂದು ಹೆಬ್ಬಾಳೆ ತಿಳಿಸಿದರು.

ಕನಕ ಕಲ್ಚರಲ್ ಫೌಂಡೇಶನ್ ಅಧ್ಯಕ್ಷ ಡಿ.ಕೆ. ಕನಕ್ ಪ್ರಾಸ್ತಾವಿಕವಾಗಿ ಮಾತನಾಡಿ ” ಸರ್ಕಾರ ಸಂಘ-ಸಂಸ್ಥೆಗಳಿಗೆ ಒಂದಿಷ್ಟು ಅನುದಾನ ನೀಡಿ ಗಡಿ ಭಾಗದಲ್ಲಿ ಗ್ರಾಮಗಳ ಹಾಗೂ ಶಿಕ್ಷಣದ ಏಳ್ಗೆಗೆ ಪ್ರೋತ್ಸಾಹಿಸಬೇಕು. ಅನೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅಂಥವರನ್ನು ಹುಡುಕಿ ಮತ್ತೆ ಶಿಕ್ಷಣದ ಕಡೆಗೆ ತರಬೇಕಾದ ಅವಶ್ಯಕತೆ ಇದೆ. ಶಾಲೆಗಳಲ್ಲಿ ಇಂತಹ ಗಡಿ ಉತ್ಸವಗಳನ್ನು ಹಮ್ಮಿಕೊಳ್ಳುವುದರ ಮುಖಾಂತರ ಮಕ್ಕಳಿಗೆ ಗಡಿಭಾಗದ ಸಮಸ್ಯೆಗಳ ಕುರಿತು ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಪಠ್ಯಚಟುವಟಿಕೆ ಜೊತೆಗೆ ಪಠ್ಯೆತರ ಚಟುವಟಿಕೆ ಕಡೆಗೆ ಗಮನ ಹರಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಲ್ಕಾಪುರ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ರೇಣುಕಾ ಸಂತೋಷ ನೆರವೇರಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಶೋಭಾವತಿ ಜಂಜಿರೆ ವಹಿಸಿದ್ದರು. ವೇದಿಕೆ ಮೇಲೆ ಪ್ರದೀಪ ಯನಗುಂದೆ, ಪಿಡಿಓ ಕಂಟೆಪ್ಪಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಹಶಿಕ್ಷಕಿ ಕಸ್ತೂರಬಾಯಿ ಶಿಂಧೆ ಸ್ವಾಗತಿಸಿದರು. ಮೀರಾ ಬೆಳ್ಳೂರೆ ನಿರೂಪಿಸಿದರು. ಕೊನೆಯಲ್ಲಿ ಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.