ಗಡಿಗಿ ಚೆನ್ನಪ್ಪ ಸರ್ಕಲ್ ಬಂಕ್ ಮುಂದೆ ಕೊಂಡಯ್ಯ ಪ್ರತಿಭಟನೆ

ಬಳ್ಳಾರಿ, ಜೂ.11: ನಗರದ ಗಡಗಿ ಚೆನ್ನಪ್ಪ. ವೃತ್ತದಲ್ಲಿರುವ ಕೇಶವರೆಡ್ಡಿ ಪೆಟ್ರೋಲ್ ಬಂಕ್ ಮುಂಭಾಗ ವಿಧಾನ‌ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ನೇತೃತ್ವದಲ್ಲಿ ತೈಲ ಧರ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ವಿದ್ಯುತ್, ದೇಶದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಧರವನ್ನು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಮನಸೋಯಿಚ್ಛೆ ಏರಿಸುವ ಮೂಲಕ ಕೊರೊನಾದಿಂದ ಸಂಕಷ್ಟದಲ್ಲಿರುವ ಜನರ ತಲೆಯ ಮೇಲೆ ಚಪ್ಪಡಿ ಎಳೆದಿವೆ, ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೊಂಡಯ್ಯ ಅವರು. ವಿದ್ಯುತ್ ದರವನ್ನು ರಾಜ್ಯ ಸರ್ಕಾರ ಕಳೆದ ಒಂದು ವರ್ಷದಲ್ಲಿ ಶೇ. 30ರಷ್ಟು ಏರಿಸಿದೆ. ಇದು ರಾಜ್ಯದ ಇತಿಹಾಸದಲ್ಲಿಯೇ ಮೊದಲು. ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಾಗಿದ್ದರೂ ಸಹ ಕೇಂದ್ರ ಸರ್ಕಾರ ಮತ್ತು ಅದಾನಿ ಕಂಪನಿಯಿಂದ ಹೆಚ್ಚಿನ ದರಕ್ಕೆ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರದ ಭ್ರಷ್ಟಾಚಾರ ಮತ್ತು ಅದಕ್ಷತೆ ಕಾರಣ ಎಂದು ಆರೋಪಿಸಿದರು.
ಮಾಜಿ ಪ್ರಧಾನಿ ಮನಮೋಹನಸಿಂಗ್ ಅವರು ಪೆಟ್ರೋಲ್ ಬೆಲೆ ಕೇವಲ ರೂ.1 ಏರಿಕೆ ಮಾಡಿದಾಗ ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಇಂದಿನ ಪ್ರಧಾನಿ ಮೋದಿಯವರು ತೀವ್ರ ವಿರೋಧ ಮಾಡಿದ್ದರು. ಬಿಜೆಪಿ ದೇಶವ್ಯಾಪಿ ಪ್ರತಿಭಟನೆ ನಡೆಸಿತ್ತು. ಈಗ ನಿತ್ಯವೂ ದರ ಏರಿಕೆಯಾಗುತ್ತಲೇ ಇದೆ ಇದಕ್ಕೆ ಬಿಜೆಪಿ ನಾಯಕರಿಗೆ ನಾಚಿಕೆಯಾಗಲ್ವೇ.
ಕೊರೊನಾದಿಂದಜನ ಸುಮ್ಮನಿರ್ತಾರೆ, ಲಾಕ್‍ಡೌನ್ ಇರುವ ಕಾರಣ ಹೊರಗೆ ಬಂದು ಪ್ರತಿಭಟನೆ ಮಾಡುವುದಿಲ್ಲ ಎಂದು ಜನರ ತಲೆಯ ಮೇಲೆ ಚಪ್ಪಡಿ ಎಳೆಯುವ ಕೆಲಸವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಬಿಡಬೇಕು ಎಂದರು.
ಪಾಲಿಕೆ ಸದಸ್ಯ ಪಿ.ಗಾದೆಪ್ಪ, ಮುಖಂಡರುಗಳಾದ ವೆಂಕಟೇಶ್ ಹೆಗಡೆ ಮೊದಲಾದವರು ಇದ್ದರು.