ಗಟ್ಟಿತನದ ಪಾತ್ರ ಮಾಡುವಾಸೆ; ವೈಷ್ಣವಿ

“ಮಿಥುನ ರಾಶಿ ” ಧಾರಾವಾಹಿ ಮೂಲಕ ನಾಡಿನ‌ ಮನೆ ಮನಗಳಿಗೆ ಪ್ರವೇಶಿಸಿದ ಪ್ರತಿಭಾವಂತ ನಟಿ ವೈಷ್ಣವಿ, ಇದೀಗ ಕೋಮಲ್ ಕುಮಾರ್ ಅಭಿನಯದ ” ಉಂಡೆ ನಾಮ” ಚಿತ್ರದ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ.

ಮೊದಲ ಚಿತ್ರದಲ್ಲಿ‌ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿರುವ  ವೈಷ್ಣವಿ ಅವರಿಗೆ ವೈವಿದ್ಯಮಯ ಪಾತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವ  ಹಂಬಲ ಹೊಂದಿದ್ದಾರೆ ಅಷ್ಟೇ ಅಲ್ಲ ಗಟ್ಟಿತನದ ಪಾತ್ರ ಮಾಡುವ ಮೂಲಕ ನಾಡಿನ ಜನರ ಮನಸ್ಸು ಗೆಲ್ಲುವ ಕನಸು ಕಂಡಿದ್ದಾರೆ.

ಹಾಸ್ಯ ಪ್ರಧಾನ ಚಿತ್ರ “ಉಂಡೆನಾಮ” ಚಿತ್ರ ಈ ವಾರ ತೆರೆಗೆ ಬಂದಿದೆ .ಬಣ್ಣದ ಯಾನದ ಕುರಿತು ಮಾಹಿತಿ ಹಂಚಿಕೊಂಡ ವೈಷ್ಣವಿ, ಉಂಡೆನಾಮದಲ್ಲಿ ಬೋಲ್ಡ್ ಪಾತ್ರವಿದೆ ಎಂದರು.

ಆರಂಭದಲ್ಲಿ ಪಾತ್ರ ಮಾಡಬೇಕಾ ಬೇಡವಾ ಎನ್ನುವ ಗೊಂದಲದಲ್ಲಿದ್ದೆ. ನಿರ್ದೇಶಕ ರಾಜಶೇಖರ್ ಅವರನ್ನು ಬೇಟಿ ಮಾಡಿದ ಬಳಿಕ ಬೋಲ್ಡ್ ಪಾತ್ರವಾದರೂ ಪಾತ್ರದಲ್ಲಿ ಯಾವುದೇ ವಲ್ಗಾರಿಟಿ  ಇಲ್ಲ. ನಟಿಸಬಹುದು ಅನ್ನಿಸಿತು. ಹೀಗಾಗಿ ಚಿತ್ರದಲ್ಲಿ ನಟಿಸಿದ್ದೇನೆ.ಚಿತ್ರಕ್ಕೆ ತಿರುವು ಕೊಡುವ ಪಾತ್ರ. ಚಿತ್ರ ನೋಡಿ ಹರಸಿ ಎಂದರು.

ಚಿತ್ರ ಅಥವಾ ಧಾರಾವಾಹಿ ಒಪ್ಪಿಕೊಳ್ಳುವಾಗ ಹಣಕ್ಕಿಂತ ಕಥೆಗೆ ಮತ್ತು ನನ್ನ ಪಾತ್ರಕ್ಕೆ ಇರುವ ಮಹತ್ವಕ್ಕೆ ಒತ್ತು ನೀಡುತ್ತೇನೆ. ಹಣವನ್ನು ಹೇಗೆ ಬೇಕಾದರೂ ಸಂಪಾದನೆ ಮಾಡಬಹುದು ಆದರೆ ಅದು ಮುಖ್ಯವಲ್ಲ. ಪಾತ್ರದ ಮೂಲಕ ನನ್ನನ್ನು ಗುರುತಿಸಿಕೊಳ್ಳುವ ಹಂಬಲವಿದೆ. ಜೊತೆಗೆ  ಕಲಾವಿದೆಯಾಗಿ ಒಳ್ಳೆಯ ಪಾತ್ರದಲ್ಲಿ ನಟಿಸುವ ಇರಾದೆಯೂ ಮನಸ್ಸಿನಲ್ಲಿದೆ .

ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಆಸೆ ಇದೆ.ಹಾಗೆ ಬೇರೆ ಬೇರೆ ಮಾದರಿಯ ಪಾತ್ರದಲ್ಲಿ ಕಾಣಿಕೊಂಡು ಒಳ್ಳೆಯ ನಟಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ಆಸೆ ಇದೆ ಎನ್ನುತ್ತಾರೆ ನಟಿ ವೈಷ್ಣವಿ

ಅಳೆದು ತೂಗಿ ಒಪ್ಪಿಗೆ

ಉಂಡೆನಾಮ ಚಿತ್ರದಲ್ಲಿ ನಟಿಸಿದ ನಂತರ ಹಲವು ಅವಕಾಶಗಳು ಬರುತ್ತಿವೆ. ಬಂದ ಎಲ್ಲಾ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಅಳೆದು ತೂಗಿ ಒಪ್ಪಿಕೊಳ್ಳಲು ನಿರ್ಧರಿಸಿದ್ದೇನೆ ಎಂದರು ನಟಿ ವೈಷ್ಣವಿ.

ಮಿಥುನ ರಾಶಿ ಧಾರಾವಾಗಿ 950 ಎಪಿಸೋಡ್ ಪ್ರದರ್ಶನ ಕಂಡು ಪೂರ್ಣಗೊಂಡಿದೆ. ಈ ನಡುವೆ ಮಲೆಯಾಳಂ ಮತ್ತು ತಮಿಳು ಧಾರಾವಾಹಿಯಲ್ಲಿ ನಟಿಸಿದ್ದೇನೆ.ಒಳ್ಳೆಯ ಪಾತ್ರ,ಅಭಿನಯಕ್ಕೆ ಸವಾಲಾಗಿರುವ ಪಾತ್ರ ಸಿಕ್ಕರೆ ಯಾವುದೇ ಭಾಷೆಯಲ್ಲಿ ನಟಿಸುತ್ತೇನೆ ಎಂದರು.

ತರಬೇತಿ ಶಾಲೆ ಇದ್ದಂತೆ

ಹತ್ತನೇ ತರಗತಿಯಲ್ಲಿ ಓದುತ್ತಿರುವಾಗಲೇ ” ಮಿಥುನ ರಾಶಿ” ಧಾರಾವಾಹಿಗೆ ನಾಯಕಿಯಾಗಿ ಆಯ್ಕೆಯಾದೆ. ಧಾರಾವಾಹಿ ತಂಡ ನನಗೆ ತರಬೇತಿ ಶಾಲೆ ಇದ್ದಂತೆ ಇತ್ತು. ನಿರ್ದೇಶಕ ವಿನೋದ್ ಡೋಂದಳೆ  ಸೇರಿ ಇಡೀ ತಂಡದ ಸಹಕಾರದಿಂದ ನಟನೆ ಮತ್ತಷ್ಟು ಸುಧಾರಿಸಿಕೊಳ್ಳಲು ಸಹಕಾರಿಯಾಯಿತು ಎಂದರು ವೈಷ್ಣವಿ.

ಕ್ಲಾಸಿಕಲ್ ಡ್ಯಾನ್ಸರ್ ಆದ ಹಿನ್ನೆಲೆಯಲ್ಲಿ ಕ್ಯಾಮರಾ ಎದುರಿಸುವ ಭಯ ಇರಲಿಲ್ಲ. ಹೀಗಾಗಿ ನಟನೆ ಮತ್ತಷ್ಟು ಸುಲಭವಾಗಲು ಕಾರಣವಾಯಿತು ಎನ್ನುವ ವಿವರ ಅವರದು.