ಗಜಾಪುರದಲ್ಲಿ ಗಂಗಾಮಾತೇ ದೇವಸ್ಥಾನಕ್ಕೆ ಶಾಸಕರಿಂದ ಭೂಮಿಪೂಜೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ನ.22 :- ಯಾವುದೇ ಪೂಜಾ ಕಾರ್ಯಕ್ರಮವಿರಲಿ ಆ ಸಂದರ್ಭದಲ್ಲಿ ಮೊದಲ ಪೂಜೆಯಾಗಿ ಗಂಗೆ ಪೂಜೆಯನ್ನು ಶ್ರೇಷ್ಠ ಪೂಜೆಯಾಗಿ ನೆರವೇರಿಸಲಾಗುತ್ತದೆ ಎಂದು ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಕೂಡ್ಲಿಗಿ ಸಮೀಪದ ಗಜಾಪುರ ಗ್ರಾಮದಲ್ಲಿ ಸೋಮವಾರ ಶ್ರೀ ಗಂಗಾಪರಮೇಶ್ವರಿ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತ ಸರ್ವರ ಪಾಪವನ್ನು ತೊಳೆಯುವವಳು ಗಂಗೆ ಅಂತಹ ದೇವಿಯ ದೇವಸ್ಥಾನದ ನಿರ್ಮಾಣಕ್ಕೆ ಗಜಾಪುರದ ಗಂಗಾಮತಸ್ಥ ಸಮುದಾಯ 15ಲಕ್ಷರೂ ಮೀರಿ ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿರುವುದು ಇಲ್ಲಿನ ಜನತೆಯ ಭಕ್ತಿಯ ಪರಾಕಾಷ್ಠೆಯನ್ನು ಮೆರೆಸುತ್ತಿದೆ. ಗ್ರಾಮದ ಗಂಗಾಮತಸ್ಥರ ಸಮುದಾಯದ ಈ ದೇವಸ್ಥಾನ ನಿರ್ಮಾಣಕ್ಕೆ ಈ ತಿಂಗಳಲ್ಲಿ 3ಲಕ್ಷರೂ ಅನುದಾನ ಬಿಡುಗಡೆಗೊಳಿಸುವುದಾಗಿ ಹಾಗೂ ವೈಯಕ್ತಿಕವಾಗಿ 200 ಚೀಲ ಸಿಮೆಂಟ್ ನೀಡುವ ಜೊತೆಗೆ ಗ್ರಾಮವಿಕಾಸ್ ಯೋಜನೆಯಡಿಯಲ್ಲಿ 6ಲಕ್ಷ ರೂ ಹಣ ಉಳಿದಿದ್ದು ಆ ಹಣ ಬೇರೆ ಕಾಮಗಾರಿಗೆ ಬಳಕೆ ಮಾಡಲು ಅವಕಾಶ ಇದ್ದಲ್ಲಿ ಅದರಲ್ಲಿ ಸಹ 3ಲಕ್ಷರೂ ನೀಡುವುದಾಗಿ ಭರವಸೆ ನೀಡಿದರು. 
ಗಡಿಗ್ರಾಮಕ್ಕೆ ಹೆಚ್ಚಿನ ಅನುದಾನ : ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಗಡಿ  ಪಂಚಾಯತಿಯಾದ ಕಂದಗಲ್ಲು ಗ್ರಾಮಪಂಚಾಯಿತಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದು ಅದರಲ್ಲಿ ಗಜಾಪುರಕ್ಕೆ ಹೆಚ್ಚು ಅನುದಾನ ನೀಡಿದ್ದೇನೆ ಎನ್ನುತ್ತಾ ಈ ಹಿಂದಿನ ಶಾಸಕರಾರು ಗಡಿಗ್ರಾಮದ ಚಿಂತನೆ ಮಾಡುತ್ತಿರಲಿಲ್ಲ ಆದರೆ ನಾನು ಹೆಚ್ಚಿನ ಮುತುವರ್ಜಿ ವಹಿಸಿ ಹೆಚ್ಚು ಅನುದಾನ ನೀಡಿದ್ದೇನೆ ಎನ್ನುತ್ತಾ ಈ ಹಿಂದಿನ ಶಾಸಕ ನೇಮಿರಾಜನಾಯ್ಕ್ ರ ಕಾರ್ಯವೈಖರಿಯನ್ನು ಮಾತಿನ ಧಾಟಿಯಲ್ಲಿ ವ್ಯಂಗ್ಯವಾಡಿದರು.
ಈ ಸಂದರ್ಭದಲ್ಲಿ ಕೊಟ್ಟೂರು ದ್ವಾರಕೀಶ, ಹಗರಿಬೊಮ್ಮನಹಳ್ಳಿ ಕಾಂಗ್ರೇಸ್ ಮುಖಂಡರಾದ ಪವಾಡಿ ಹನುಮಂತಪ್ಪ, ಅಕ್ಕಿತೊಟೇಶ, ವೆಂಕಟೇಶ, ದೂಪದಹಳ್ಳಿ ಗೂಳಿ ಮಲ್ಲಿಕಾರ್ಜುನ, ಗಜಾಪುರದ ಕಾಂಗ್ರೇಸ್ ಮುಖಂಡರಾದ ಬೆಳದೇರಿ ಮಲ್ಲಿಕಾರ್ಜುನ, ಗಜಾಪುರ ಗಂಗಾಮತ ಸಮಾಜದ  ಬಾರಿಕರ ವೆಂಕಟೇಶಪ್ಪ, ಗಾಳೇಪ್ಪರ ಭೀಮಪ್ಪ, ಬಾರಿಕರ ಮಂಜುನಾಥ, ನೀರಗಂಟಿ ಮಂಜುನಾಥ, ಯರ್ರಿಸ್ವಾಮಿ, ಬಾರಿಕರ ಕೊಟ್ರಪ್ಪ, ಕಾಳಾಪುರ ಮಲ್ಲೇಶ, ಅಕ್ಕಾಪುರ ಶಿವಲಿಂಗಪ್ಪ, ಕಂದಗಲ್ಲು ಪರಸಪ್ಪ, ಕುಬೇರಪ್ಪ, ಉತ್ತಂಗಿ ಚನ್ನಬಸಪ್ಪ, ಕಾಳಾಪುರ ರಾಜು, ಬಾರಿಕರ ಪರಶುರಾಮ, ಗ್ರಾಮಪಂಚಾಯಿತಿ ಸದಸ್ಯ ಭತ್ತನಹಳ್ಳಿ ಪ್ರಸನ್ನ, ತಳವಾರ ಅಂಜಿನಪ್ಪ, ಬೆಳದೇರಿ ನಾಗರಾಜ, ಬಣಕಾರ ಬಸವರಾಜ, ಎಸ್ ಡಿ ಎಂ ಸಿ ಅಧ್ಯಕ್ಷ ಬಿ ಗಾಳೆಪ್ಪ, ಇತರರು ಉಪಸ್ಥಿತರಿದ್ದರು ಹಾಗೂ ಇದೇ ಸಂದರ್ಭದಲ್ಲಿ ಶಾಸಕ ಭೀಮಾನಾಯ್ಕ್ ನೇತೃತ್ವದಲ್ಲಿ ಕಾಳಾಪುರ ಹನುಮಂತಪ್ಪ ಬಿಜೆಪಿ ತೊರೆದು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡರು. 
ಕಾರ್ಯಕ್ರಮಕ್ಕೂ ಮೊದಲು ಬುನಾಧಿ ಪೂಜೆಯ  ಪೂಜಾಕಾರ್ಯವನ್ನು ಕೂಡ್ಲಿಗಿ ಹಿರೇಮಠದ ಶ್ರೀ ಪ್ರಶಾಂತಸಾಗರ ಸ್ವಾಮೀಜಿ ಹಾಗೂ ಇತರರು ನೆರವೇರಿಸಿದರು.