ಗಜಲ್ ಗಂಭೀರ ಸಾಹಿತ್ಯದ ರೂಪ

ಶಹಾಪುರ,ನ.25-ಗಜಲ್ ಎಂಬುದು ಉರ್ದು ಕಾವ್ಯದ ಅತ್ಯಂತ ಜನಪ್ರಿಯ ಹಾಗೂ ಗಂಭೀರ ಸಾಹಿತ್ಯ ರೂಪ. ಉರ್ದು ಕಾವ್ಯದ ಕೆನೆ, ಘನತೆ, ಪ್ರತಿಷ್ಠೆ ಗೌರವದ ಪ್ರತೀಕವಾಗಿದೆ ಎಂದು ಗಜಲ್ ಲೇಖಕಿ ಜ್ಯೋತಿ ದೇವಣಗಾಂವ ಹೇಳಿದರು.
ಪಟ್ಟಣದ ಫಕೀರೇಶ್ವರ ಮಠದ ಬಯಲು ಬಸವ ಮಂಟಪದಲ್ಲಿ ಸಗರದ ಕಲಾನಿಕೇತನ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಸಿದ್ಧರಾಮ ಹೊನ್ಕಲ್ ರವರು ರಚಿಸಿರುವ “ಆತ್ಮಸಖಿಯ ಧ್ಯಾನದಲ್ಲಿ” ಎಂಬ ಗಜಲ್ ಕೃತಿ ಕುರಿತು ಮಾತನಾಡಿದರು. ಈ ಕೃತಿ ಗಜಲ್ ಪ್ರೇಮ ಕಾವ್ಯಕ್ಕೆ ಒಂದು ಬಹುದೊಡ್ಡ ಕೊಡುಗೆ ಎಂದು ಕೃತಿಯ ಗಜಲ್ ಗಳ ವೈವಿಧ್ಯಮಯತೆಯನ್ನು ಶ್ಲಾಘಿಸಿದರು.
ಕಲಬುರ್ಗಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕÀ ಡಾ. ವಾಸುದೇವ ಸೇಡಂ ಅವರು ಕೃತಿ ಲೋಕಾರ್ಪಣೆ ಮಾಡಿ ಮಾತನಾಡುತ್ತ ಸಿದ್ಧರಾಮ ಹೊನ್ಕಲ್ ಅವರು ಗಜಲ್ ಕ್ಷೇತ್ರದ ದೃವತಾರೆಯಾಗಿ ಬೆಳಗುತ್ತಿದ್ದಾರೆ. ಒಂದೇ ವರ್ಷದಲ್ಲಿ ನಾಲ್ಕು ಉತ್ಕೃಷ್ಟ ಗಜಲ್ ಸಂಕಲನ ಪ್ರಕಟಿಸಿ ಅವುಗಳಿಗೆ ಕಾವ್ಯ ಮಾಣಿಕ್ಯ ಎಂಬ ಪುರಸ್ಕಾರ ಸಹ ಪಡೆದು ಗಜಲ್ ಸಾಹಿತ್ಯ ಕ್ಷೇತ್ರದಲ್ಲಿ ದಾಖಲೆ ನಿರ್ಮಿಸಿದ್ದಾರೆ ಎಂದರು. ಗಜಲ್ ಎಂಬುದು ಎದೆಯೊಳಗಿನ ಪಿಸುಮಾತು.’ಕಾವ್ಯ ಮನುಷ್ಯನ ಅಭಿವ್ಯಕ್ತಿ ಸ್ವಾತಂತ್ರ್ಯದ ಅಂಗವೂ ಹೌದು, ಆದ್ದರಿಂದ ಭಾರತೀಯ ಪರಂಪರೆಯಲ್ಲಿ ಗಜಲ್‍ಗೆ ವಿಶೇಷ ಸ್ಥಾನವಿದೆ ಎಂದು ನುಡಿದರು. ದೇಶ ಹಾಗೂ ಭಾಷೆಯ ಜನರ
ದನಿಯಾಗಿ, ಸಂಸ್ಕೃತಿಯಾಗಿ, ರಸಿಕತೆಯ ಎದೆಯ ಹಾಡಾಗಿ, ಪ್ರೇಮ ಕಾಮದ ಅಂತರಂಗದ ಸಂವೇದನೆಯಾಗಿ, ಎಲ್ಲದಕ್ಕಿಂತ ಮುಖ್ಯ ಸುಂದರ ಕಾವ್ಯವಾಗಿ ಸರ್ವರನ್ನು ಸೆಳೆಯುವ ಶಕ್ತಿ ಈ ಗಜಲ್ ಸಾಹಿತ್ಯಕ್ಕಿದೆ ಎಂದರು.
ಲೇಖಕ ಹಾಗೂ ಹಿರಿಯ ಸಾಹಿತಿ ಸಿದ್ಧರಾಮ ಹೊನ್ಕಲ್ ಮಾತನಾಡುತ್ತ, ಗಜಲ್ ಎನ್ನುವ ಶಬ್ದವೂ ಕಿವಿಗೆ ಬೀಳುತ್ತಲೇ ಹೃದಯದ ಮಿಡಿತ ಪುಳಕಗೊಳ್ಳುತ್ತದೆ. ತಾಜಾ ಬೆಣ್ಣೆಯ ಕೋಮಲತೆ ಅರಳಿನಿಂತ ಪುಷ್ಪಲತೆಯ ಪರಿಮಳದ ಅನುಭೂತಿಯನ್ನು ಕರುಣಿಸುತ್ತದೆ. ಪ್ರೀತಿಯಿಂದ ಹಸಿದ ಮನಸ್ಸನ್ನು ತಣಿಸುವ, ಅಂಧಕಾರವನ್ನು ಮರೆಯಾಗಿಸುವ ಮಧುರತೆ ಇರುತ್ತದೆ. ಆದ್ದರಿಂದ ಗಜಲ್ ಕೃತಿಗಳನ್ನು ಓದಿ ಆಳಕ್ಕಿಳಿದು ಅಧ್ಯಯನ ಮಾಡಿದಾಗ ಮಾತ್ರ ಗಜಲ್ ಸಾಹಿತ್ಯ ಅರ್ಥವಾಗುತ್ತದೆ ಎಂದು ಹೇಳಿದರು.
ಫಕಿರೇಶ್ವರ ಮಠದ ಗುರುಪಾದ ಮಹಾಸ್ವಾಮಿಗಳು ಸಮಾರಂಭದ ಸಾನಿಧ್ಯ ವಹಿಸಿದ್ದರು. ಚನ್ನವೀರಯ್ಯ ಸ್ವಾಮಿಗಳು, ಇಲಕಲ್ಲದ ಡಾ: ಬಸವರಾಜ ಗವಿಮಠ, ಸಿದ್ಧಲಿಂಗಣ್ಣ ಆನೇಗುಂದಿ, ಟ್ರಸ್ಟ್ ಅಧ್ಯಕ್ಷ ಬಸವರಾಜ ಸಿಣ್ಣೂರು ಹಾಗೂ ಇತರರು ಉಪಸ್ಥಿತರಿದ್ದರು.