ಗಗನಸಖಿ ಕೊಲೆ ಪ್ರಿಯಕರ ತಪ್ಪೊಪ್ಪಿಗೆ

ಬೆಂಗಳೂರು,ಮಾ.೧೮- ಕೋರಮಂಗಲದ ಅಪಾರ್ಟ್‌ಮೆಂಟ್ ವೊಂದರ ನಾಲ್ಕನೇ ಮಹಡಿಯಿಂದ ಕೆಳಗೆ ನೂಕಿ ತನ್ನನ್ನು ಭೇಟಿಯಾಗಲು ಬಂದಿದ್ದ ಗಗನಸಖಿ ಕೊಲೆ ಮಾಡಿರುವುದನ್ನು ಆಕೆಯ ಪ್ರಿಯಕರ ತಪ್ಪೊಪ್ಪಿಕೊಂಡಿದ್ದಾನೆ.
ಹಿಮಾಚಲಪ್ರದೇಶ ಮೂಲದ ಅರ್ಚನಾ ಧೀಮನ್ (೨೮) ಮೃತ ಗಗನಸಖಿಯಾಗಿದ್ದಾರೆ. ಕೋರಮಂಗಲದ ೮ನೇ ಬ್ಲಾಕ್‌ನ ರೇಣುಕಾ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನ ತಾನು ವಾಸವಿದ್ದ ಬಾಲ್ಕನಿಯಿಂದ ಬಿದ್ದು ಅರ್ಚನಾ ಮೃತಪಟ್ಟಿದ್ದಳು.
ಆರಂಭದಲ್ಲಿ ಆತ್ಮಹತ್ಯೆ ಎಂದು ಶಂಕಿಸಲಾಗಿತ್ತು. ಸಾವಿಗೀಡಾದ ದಿನ ಅರ್ಚನಾಳ ಬಾಯ್‌ಫ್ರೆಂಡ್ ಸುಳಿವು ಸಿಕ್ಕಿದ್ದರಿಂದ ಆತ್ಮಹತ್ಯೆ ಪ್ರಕರಣ ಅನುಮಾನಾಸ್ಪದಾ ಪ್ರಕರಣಕ್ಕೆ ತಿರುಗಿತ್ತು. ಅರ್ಚನಾ ಬಾಯ್‌ಫ್ರೆಂಡ್ ಆದೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಕೆಯನ್ನು ಬಾಲ್ಕನಿಯಿಂದ ತಳ್ಳಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಮದುವೆ ಆಗಲು ಒಪ್ಪದಿದ್ದರೆ ಲೈಗಿಂಕ ದೌರ್ಜನ್ಯ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸುತ್ತೇನೆ ಎಂದು ಅರ್ಚನಾ ಬೆದರಿಕೆ ಹಾಕಿದ್ದಳು. ಮೃತಪಟ್ಟ ದಿನವೂ ಕೂಡ ಇದೇ ಬೆದರಿಕೆ ಮುಂದುವರಿಸಿದ್ದಳು. ಇದರಿಂದ ಇಬ್ಬರ ನಡುವೆ ವಾಗ್ವಾದ ನಡೆಯಿತು. ಅಂತಿಮವಾಗಿ ಆಕೆಯನ್ನು ಬಾಲ್ಕನಿಯಿಂದ ತಳ್ಳಿ ಕೊಲೆ ಮಾಡಿದೆ ಎಂದು ಆದೇಶ್ ತಪ್ಪೊಪ್ಪಿಕೊಂಡಿದ್ದಾನೆ. ಮೃತ ಅರ್ಚನಾ ಅಂತಾರಾಷ್ಟ್ರೀಯ ವಿಮಾನಯಾನ ಕಂಪನಿಯಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದಳು. ಆಕೆಯ ಪ್ರಿಯಕರ ಕಾಸರಗೋಡು ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಆದೇಶ್ ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆರು ತಿಂಗಳ ಹಿಂದೆ ಸ್ನೇಹಿತರ ಮೂಲಕ ಅರ್ಚನಾ ಮತ್ತು ಆದೇಶ್ ಪರಸ್ಪರ ಪರಿಚಿತರಾಗಿದ್ದರು. ಪರಿಚಯ ಸ್ನೇಹಕ್ಕೆ ತಿರುಗಿ ಇಬ್ಬರೂ ಪ್ರೀತಿಸಲು ಆರಂಭಿಸಿದ್ದರು. ಕೆಲ ವಿಚಾರಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯವಿತ್ತು. ಹೀಗಾಗಿ ಆಗಾಗ ಜಗಳವಾಡುತ್ತಿದ್ದರು. ದುಬೈನಲ್ಲಿದ್ದ ಅರ್ಚನಾ ನಾಲ್ಕು ದಿನದ ಹಿಂದೆ ದುಬೈನಿಂದ ಬೆಂಗಳೂರಿಗೆ ಬಂದಿದ್ದಳು. ಈ ನಾಲ್ಕು ದಿನ ಇಬ್ಬರು ಒಟ್ಟಿಗಿದ್ದರು. ಮಾರ್ಚ್ ೧೧ರಂದು ಕೋರಮಂಗಲದ ಫೋರಂ ಮಾಲ್‌ನಲ್ಲಿ ಸಿನಿಮಾಕ್ಕೆ ತೆರಳಿದ್ದರು. ರಾತ್ರಿ ಸಿನಿಮಾ ನೋಡಿಕೊಂಡು ಅಪಾರ್ಟ್‌ಮೆಂಟ್‌ಗೆ ಬಂದಿದ್ದು, ಇಬ್ಬರೂ ಸೇರಿ ಪಾರ್ಟಿ ಮಾಡಿದ್ದಾರೆ. ಈ ವೇಳೆ ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದ್ದು, ವಾಗ್ವಾದವಾಗಿದೆ. ಮಧ್ಯರಾತ್ರಿ ೧೨ ಗಂಟೆಗೆ ಅರ್ಚನಾ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದಿದ್ದಳು. ಈ ವೇಳೆ ತಲೆಗೆ ಗಂಭೀರ ಪೆಟ್ಟು ಬಿದ್ದು ಸ್ಥಳದಲ್ಲೇ ಆಕೆ ಮೃತಪಟ್ಟಿದ್ದಾಳೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ನಗರ ಪೊಲೀಸರು ಸಮೀಪದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ, ಅರ್ಚನಾ ಪ್ರಿಯಕರ ಆದೇಶ್?ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.