
ಶ್ರೀಹರಿಕೋಟಾ(ಆಂಧ್ರಪ್ರದೇಶ),ಅ.೨೧:ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಾನವಸಹಿತ ಗಗನಯಾನ ಯೋಜನೆಯ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ.
ಮಾನವಸಹಿತ ಗಗನಯಾನ ಪರೀಕ್ಷೆಯನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಂದು ನಡೆಸಿದ್ದು, ಟೆಸ್ಟ್‌ವೆಹಿಕಲ್ ಡೆವಲಪ್‌ಮೆಂಟ್ ಫ್ಲೈಟ್ ಮಿಷನ್-೧ (ಟಿವಿ-ಡಿ೧ ಫ್ಲೈಟ್ ಟೆಸ್ಟ್) ಎಂದು ಹೆಸರಿಸಲಾದ ಮೊದಲ ಮಾನವಸಹಿತ ಗಗನಯಾನ ಪರೀಕ್ಷೆಯನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಇಂದು ಬೆಳಿಗ್ಗೆ ಇಸ್ರೊ ಉಡಾವಣೆ ಮಾಡಿದ್ದು, ಮುಂದಿನ ದಿನಗಳಲ್ಲಿ ಮಾನವನನ್ನು ಗಗನಕ್ಕೆ ಕಳುಹಿಸುವ ಈ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.
ಈ ಮಿಷನ್ ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಸಾಧ್ಯ ಎಂದು ಸಾಬೀತುಪಡಿಸುವ ಭಾರತದ ಪ್ರಯತ್ನದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
ತಾಂತ್ರಿಕ ದೋಷದಿಂದಾಗಿ ಮೂರು ಬಾರಿ ಮುಂದೂಡಿದ್ದ ಗಗನ ಯಾನ ಪರೀಕ್ಷಾರ್ಥ ಪ್ರಯೋಗವನ್ನು ಅಂತಿಮವಾಗಿ ಬೆಳಿಗ್ಗೆ ೧೦ ಗಂಟೆಗೆ ನೌಕೆಯಲ್ಲಿದ್ದ ತಾಂತ್ರಿಕ ದೋಷವನ್ನು ಸರಿಪಡಿಸಿ ಇಸ್ರೊ ಯಶಸ್ವಿ ಪ್ರಯೋಗ ನಡೆಸಿತು. ಉಡ್ಡಯನಗೊಂಡ ರಾಕೆಟ್ ೧೨ ಕಿ.ಮೀ ಎತ್ತರಕ್ಕೆ ಹಾರಿದ ನಂತರ ಪೂರ್ವನಿರ್ಧಾರದಂತೆ ಅದು ತನ್ನ ಕಾರ್ಯವನ್ನು ಸ್ಥಗಿತಗೊಳಿಸಿತು. ತಕ್ಷಣವೇ ಅದರೊಳಗಿದ್ದ ಗಗನಯಾನಿಗಳ ಮಾದರಿ ಹೊತ್ತ ಭಾಗವು ಸುರಕ್ಷಿತವಾಗಿ ನೌಕೆಯಿಂದ ಹೊರ ಬಂದಿತು. ಗಗನಯಾನ ಮಿಷನ್ ಭಾಗವಾದ ಫ್ಲೈಟ್ ಟೆಸ್ಟ್ ವೆಹಿಕಲ್ ಅಬಾರ್ಡ್ ಪರೀಕ್ಷಾರ್ಥ ಪ್ರಯೋಗವಾದ ಇದರಲ್ಲಿ ಪ್ರಾರಾಚೂಟ್‌ಗಳ ಮೂಲಕ ಬಂಗಾಳಕೊಲ್ಲಿಯಲ್ಲಿ ಲ್ಯಾಂಡ್ ಆಯಿತು.
ಈ ಹಿಂದೆ ದಕ್ಷಿಣಧ್ರುವಕ್ಕೆ ಚಂದ್ರಯಾನ ಹಾಗೂ ಸೂರ್ಯನತ್ತ ಆದಿತ್ಯ-ಎಲ್೧ ಯಶಸ್ವಿ ಉಡ್ಡಯನ ಬಳಿಕ ಇದೀಗ ಮಾನವಸಹಿತ ಗಗನಯಾನ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗುವ ಮೂಲಕ ಇಸ್ರೊಗೆ ಮತ್ತೊಂದು ಗರಿ ಪ್ರಾಪ್ತವಾಗಿದೆ.ಗಗನಯಾನ ಪರೀಕ್ಷಾರ್ಥವನ್ನು ಇಂದು ಬೆಳಿಗ್ಗೆ ೮.೪೫ಕ್ಕೆ ಇಸ್ರೊ ಉಡಾವಣೆ ಮಾಡಲು ಸಜ್ಜಾಗಿತ್ತು. ಇದಕ್ಕೂ ಮುನ್ನ ೮.೩೦ಕ್ಕೆ ಉಡ್ಡಯನಕ್ಕೆ ಸಮಯ ನಿಗದಿಮಾಡಲಾಗಿತ್ತು. ಆದರೆ, ಹವಾಮಾನ ವೈಪರೀತ್ಯದಿಂದಾಗಿ ಸಮಯ ಬದಲಾವಣೆ ಮಾಡಿ ಅಂತಿಮ ಕ್ಷಣದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಕೆಲಕಾಲ ಉಡಾವಣಾ ಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿತ್ತು. ಇಸ್ರೊ ವಿಜ್ಞಾನಿಗಳು ತಾಂತ್ರಿಕ ದೋಷ ಸರಿಪಡಿಸಿದ ಬಳಿಕ ಮಾನವರಹಿತ ಗಗನಯಾನ ಪರೀಕ್ಷೆ ಟಿವಿ-ಡಿ೧ ರಾಕೆಟ್‌ನ್ನು ಯಶಸ್ವಿಯಾಗಿ ಉಡ್ಡಯನ ಮಾಡಲಾಯಿತು.ಉಡ್ಡಯನಗೊಂಡ ರಾಕೆಟ್ ೧೨ ಕಿ.ಮೀ ಎತ್ತರಕ್ಕೆ ಹಾರಿದ ನಂತರ ಪೂರ್ವನಿರ್ಧಾರದಂತೆ ಅದು ತನ್ನ ಕಾರ್ಯವನ್ನು ಸ್ಥಗಿತಗೊಳಿಸಿತು. ತಕ್ಷಣವೇ ಅದರಲ್ಲಿದ್ದ ಗಗನಯಾನಿಗಳ ಮಾದರಿ ಹೊತ್ತ ಭಾಗವು ಸುರಕ್ಷಿತವಾಗಿ ನೌಕೆಯಿಂದ ಹೊರ ಬಂದಿತು.ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಟಿವಿ-ಡಿ೧ ನಭಕ್ಕೆ ಚಿಮ್ಮುತ್ತಿದ್ದಂತೆ ಸತೀಶ್ ಧವನ್ ಕೇಂದ್ರದಲ್ಲಿ ಜಮಾಯಿಸಿದ ವಿಜ್ಞಾನಿಗಳು ಚಪ್ಪಾಳೆ ತಟ್ಟಿ ಸಂತಸ ವಿನಿಮಯ ಮಾಡಿಕೊಂಡರು. ಟಿವಿ-ಡಿ೧ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಲಿದೆ ಎಂದು ಇಸ್ರೊ ವಿಶ್ವಾಸ ವ್ಯಕ್ತಪಡಿಸಿದೆ.
ಟಿವಿ-ಡಿ೧ ಗಗನಯಾನ ನಿರ್ಣಾಯಕ ಭಾಗವಾಗಿದ್ದು, ಮೂರು ವ್ಯಕ್ತಿಗಳ ಸಿಬ್ಬಂದಿಯನ್ನು ಮೂರು ದಿನಗಳ ಕಾರ್ಯಾಚರಣೆಗಾಗಿ ೪೦೦ ಕಿ.ಮೀ ಕಕ್ಷೆಗೆ ಕಳುಹಿಸಿದ ನಂತರ ಬಂಗಾಳಕೊಲ್ಲಿಯಲ್ಲಿ ಗಗನಯಾನ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಲಿದೆ. ಜತೆಗೆ ಸುರಕ್ಷಿತ ವಾಪಾಸಾತಿಯನ್ನು ಖಚಿತಪಡಿಸಿಕೊಂಡು ಮಾನವರಹಿತ ಬಾಹ್ಯಾಕಾಶ ಯಾನಕ್ಕೆ ಭಾರತದ ಸಾಮರ್ಥ್ಯ ಪ್ರದರ್ಶಿಸುವ ಗುರಿಯನ್ನು ಇಸ್ರೊ ಹೊಂದಿದೆ.ಟಿವಿ-ಡಿ೧ ವಾಹಕವು ಮಾರ್ಪಡಿಸಿ ವಿಕಾಸ್ ಇಂಜಿನ್ ಒಳಗೊಂಡಿದೆ. ಕ್ಯ್ರೂ ಮಾಡ್ಯೂಲ್ ಮತ್ತು ಕ್ರ್ಯೂ ಎಸ್ಕೇಪ್ ಸಿಸ್ಟಂ ಬಳಸುತ್ತದೆ. ಇದು ೩೪.೯ ಮೀ. ಎತ್ತರದಲ್ಲಿದ್ದು, ೪೪ ಟನ್‌ಗಳ ತೂಕ ಹೊಂದಿದೆ. ಈ ಮಿಷನ್ ಸಫಲವಾದರೆ ಮಾನವ ಸಹಿತ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡುವ ಸಾಮರ್ಥ್ಯವಿರುವ ಪ್ರಬಲ ರಾಷ್ಟ್ರಗಳ ಪಟ್ಟಿಗೆ ಭಾರತವು ಸೇರ್ಪಡೆಯಾಗಲಿದೆ.ಈಗಾಗಲೆ ಅಮೆರಿಕಾ, ರಷ್ಯಾ ಮತ್ತು ಚೀನಾ ನಂತರ ಗಗನಯಾನದ ಪ್ರಯೋಗವನ್ನು ಭಾರತ ನಡೆಸಿದ ಕೀರ್ತಿಗೆ ಪಾತ್ರವಾಗಿದೆ.
ವಿದ್ಯಾರ್ಥಿಗಳ ಸಂಭ್ರಮ
ಗಗನಯಾನ ಪರೀಕ್ಷಾರ್ಥ ಯೋಜನೆಯು ಯಶಸ್ವಿಯಾಗಿರುವುದರಿಂದ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಹೊರಗಡೆ ಜಮಾಯಿಸಿದ್ದ ನೂರಾರು ವಿದ್ಯಾರ್ಥಿಗಳು, ಪ್ರೇಕ್ಷಕರು ಸಂಭ್ರಮ ಆಚರಿಸಿದರು. ವಿದ್ಯಾರ್ಥಿಗಳು ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದು ಪರೀಕ್ಷೆ ಯಶಸ್ವಿಯಾಗುತ್ತಿದ್ದಂತೆ ವಿಜಯೋತ್ಸವ ಆಚರಿಸಿ ಕುಣಿದು ಕುಪ್ಪಳಿಸಿದರು.