ಗಗನಯಾತ್ರಿಯನ್ನು ವಿವಾಹವಾದ ನಟಿ ಲೀನಾ

ತಿರುವನಂತಪುರಂ,ಫೆ.೨೮-ಪ್ರಸಿದ್ಧ ಮಲಯಾಳಂ ನಟಿ ಲೀನಾ ಅವರು ಗಗನ್ಯಾನ್ ಗಗನಯಾತ್ರಿ ಗುಂಪಿನ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಅವರನ್ನು ವಿವಾಹವಾಗಿದ್ದಾರೆ.
ನಟಿ ಮಂಗಳವಾರ, ಫೆಬ್ರವರಿ ೨೭ ರಂದು ಇನ್ಸ್ಟಾಗ್ರಾಮ್ ನಲ್ಲಿ ಈ ವಿಷಯ ಬಹಿರಂಗಪಡಿಸಿದ್ದಾರೆ. ಈ ವಿವಾಹ ಜನವರಿ ೧೭, ೨೦೨೪ ರಂದು ನಡೆದಿದೆ .ಜನವರಿ ತಿಂಗಳಿನಲ್ಲಿಯೇ ಮದುವೆ ನಡೆದಿದ್ದರೂ ಗೌಪ್ಯತೆಯ ಕಾರಣದಿಂದ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ ಎಂದಿದ್ದಾರೆ.
ಗ್ರೂಪ್ ಕ್ಯಾಪ್ಟನ್ ನಾಯರ್ ಭಾರತೀಯ ವಾಯುಪಡೆಯಲ್ಲಿ ಪರೀಕ್ಷಾರ್ಥ ಪೈಲಟ್ ಆಗಿದ್ದಾರೆ. ಗಗನ್‌ಯಾನ್ ಮಿಷನ್‌ಗಾಗಿ ತರಬೇತಿ ಪಡೆಯುತ್ತಿರುವ ನಾಲ್ವರು ಗಗನಯಾತ್ರಿಗಳಲ್ಲಿ ಒಬ್ಬರು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗ್ರೂಪ್ ಕ್ಯಾಪ್ಟನ್ ನಾಯರ್ ಅವರನ್ನು ಹೆಸರಿಸಿದ ಕೆಲವೇ ಗಂಟೆಗಳ ನಂತರ, ಲೀನಾ ಸಾಮಾಜಿಕ ಮಾಧ್ಯಮದಲ್ಲಿ ಪ್ರಶಾಂತ್ ನಾಯರ್ ಅವರೊಂದಿಗಿನ ವಿವಾಹವನ್ನು ಹೆಮ್ಮೆಯಿಂದ ಘೋಷಿಸಿದ್ದಾರೆ.
ಪತಿ ಪ್ರಶಾಂತ್ ನಾಯರ್ ಅವರೊಂದಿಗಿನ ವೀಡಿಯೊವನ್ನು ಹಂಚಿಕೊಂಡ ಲೀನಾ, ಇಂದು ೨೭ ಫೆಬ್ರವರಿ ೨೦೨೪ ರಂದು ನಮ್ಮ ಪ್ರಧಾನಿ ಮೋದಿ ಅವರು ಭಾರತೀಯ ವಾಯುಪಡೆಯ ಫೈಟರ್ ಪೈಲಟ್ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಅವರನ್ನು ಮೊದಲ ಭಾರತೀಯ ಗಗನಯಾತ್ರಿ ಎಂದು ಘೋಷಿಸಿದ್ದಾರೆ. ಇದು ಹೆಮ್ಮೆಯ ವಿಷಯವಾಗಿದೆ. ದೇಶ, ಕೇರಳ ರಾಜ್ಯಕ್ಕೆ ಮತ್ತು ವೈಯಕ್ತಿಕವಾಗಿ ನನಗೆ ಎಂದು ಬರೆದುಕೊಂಡಿದ್ದಾರೆ.
ಲೀನಾ ಮಲಯಾಳಂ ಚಿತ್ರರಂಗದಲ್ಲಿ ಪ್ರಮುಖವಾಗಿ ಕೆಲಸ ಮಾಡಿದ್ದಾರೆ. ಮಲಯಾಳಂ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಹಿಂದಿ ಭಾಷೆಯ ಚಿತ್ರಗಳಲ್ಲೂ ನಟಿಸಿದ್ದಾರೆ. ಮಲಯಾಳಂನಲ್ಲಿ ೧೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.