ಗಗನಕ್ಕೇರಿರುವ ಟೊಮೆಟೋ ದರ -ಗ್ರಾಹಕರು ಗಡಗಡ

ಕೋಲಾರ,ಜು,೪- ಭಾರತೀಯ ಅಡುಗೆಯ ಮನೆಗಳಲ್ಲಿ ಟೊಮೆಟೋ ಇಲ್ಲದೇ ಅಂದಿನ ಊಟ ತಿಂಡಿಗಳಾಗದು. ನಾವು ಅತಿಹೆಚ್ಚು ಬಳಸುವಂತಹ ತರಕಾರಿ ಟೊಮೆಟೋ. ಆದರೆ, ಇಂದು ಎಷ್ಟೋ ಮನೆಗಳಲ್ಲಿ ಒಂದು ಟೊಮೆಟೋ ಬಳಸಲೂ ಹಿಂದೆ ಮುಂದೆ ನೋಡುವಂಥ ಸ್ಥಿತಿ ಉದ್ಭವಿಸಿದೆ. ಮತ್ತೆ ಕೆಲವರು ಟೊಮೆಟೋ ಬದಲಾಗಿ ಹುಣಸೆಹಣ್ಣಿನ ಹುಳಿಯ ಮೊರೆ ಹೋಗಿದ್ದಾರೆ. ಇದಕ್ಕೆಲ್ಲ ಕಾರಣ, ಗಗನಕ್ಕೇರಿರುವ ಡೆಂಜರ್ ಟೊಮೆಟೋ ದರ!
ಒಂದು ತಿಂಗಳ ಹಿಂದೆ ದೇಶದಲ್ಲೇ ಅತಿ ಹೆಚ್ಚು ಟೊಮೆಟೋ ಬೆಳೆಯುವ ಮಹಾರಾಷ್ಟ್ರದ ನಾಸಿಕ್‌ನಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರು ೧ ಕಿಲೋ ಟೊಮೆಟೋಗೆ ೧ ರೂ. ಎನ್ನುವ ವಿಚಾರ ಕೇಳಿ, ಎಪಿಎಂಸಿಯ ನಾಲ್ಕೂ ದಿಕ್ಕಿನ ರಸ್ತೆಗಳಿಗೆ ಟೊಮೆಟೋಗಳನ್ನು ಚೆಲ್ಲಿ ಪ್ರತಿಭಟನೆ ನಡೆಸಿದ್ದರು. ಆದರೆ, ಈಗ ಒಂದು ತಿಂಗಳ ನಂತರ ಅಲ್ಲಿ ಒಂದು ಕಿಲೋ ಟೊಮೆಟೋ ಬೆಲೆ ೮೦ರಿಂದ ೧೧೦ ರೂ. ಮಾರುಕಟ್ಟೆಯಲ್ಲಿ ದರ ಮುಟ್ಟಿದರೆ. ಎಪಿಎಂಸಿ ಮಾರುಕಟ್ಟೆಯಲ್ಲಿ ೧೫ ಕೆಜಿ ಒಂದು ಬಾಕ್ಸ್‌ಗೆ ೮೦೦ ರೂ.ನಿಂದ ೧೫೦೦ ದರ ಮುಟ್ಟಿದೆ ಎಂದು ಮಾರುಕಟ್ಟೆಯ ಮಂಡಿ ಮಾಲೀಕರ ಮಾತಾಗಿದೆ.
ಪ್ರಸ್ತುತ ಕೋಲಾರದ ಟೊಮೆಟೋಗೆ ಶೇ.೧೦೦ರಷ್ಟು ಬೇಡಿಕೆ ಇದೆ. ಆದರೆ, ಕೋಲಾರದ ರೈತರಿಂದ ಶೇ.೩೦ರಷ್ಟು ಪೂರೈಸಲು ಮಾತ್ರವೇ ಸಾಧ್ಯವಾಗುತ್ತಿದೆ. ರೈತರು ಬೆಳೆದ ಶೇ.೭೦ರಷ್ಟು ಬೆಳೆ ಕೈಗೆ ಸಿಗದಂತಾಗಿರುವುದು ಮಾರುಕಟ್ಟೆಯಲ್ಲಿ ಟೊಮೆಟೋ ಕೊರತೆಯನ್ನು ಉಲ್ಬಣಿಸುವಂತೆ ಮಾಡಿದೆ. ಇತರೆ ಭಾಗದಲ್ಲಿ ತಮಿಳುನಾಡು, ಮಧ್ಯ ಪ್ರದೇಶದ ಭಾಗದಲ್ಲಿ ಟೊಮೆಟೋ ಫಸಲು ಆರಂಭವಾಗಲು ಇನ್ನೂ ೩ ತಿಂಗಳು ಕಾಯಬೇಕು. ಅಲ್ಲಿಯವರೆಗೆ ಮಾರುಕಟ್ಟೆಯಲ್ಲಿ ಟೊಮೆಟೋಗೆ ದುಬಾರಿ ಬೆಲೆಯಿರುವ ಸಾಧ್ಯತೆ ಇದೆ ಎನ್ನುತ್ತಾರೆ ಕೃಷಿ ಮಾರುಕಟ್ಟೆ ತಜ್ಞರು.


ಕಳೆದ ೨ ವರ್ಷಗಳಿಂದ ಟೊಮೆಟೋ ಗಿಡಗಳಿಗೆ ಬಿಳಿಸೊಳ್ಳೆ, ವೈರಸ್ ಬಾಧೆ ಕಾಡುತ್ತಿದ್ದರೂ, ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ, ಸರಕಾರ, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ಕೃಷಿ ಇಲಾಖೆ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಕೂಡಲೇ ರೈತರ ಹೊಲಗಳಿಗೆ ರೋಗದ ಮೂಲ ಕಂಡುಕೊಳ್ಳಬೇಕಿದೆ. ಸೂಕ್ತ ಔಷಧ ಕಂಡುಹಿಡಿದು, ರೈತರಿಗೆ ಮಾರ್ಗದರ್ಶನ ಮಾಡಿದರಷ್ಟೇ ಸಮಸ್ಯೆಗೆ ಪರಿಹಾರ ಸಾಧ್ಯ.

ಸಿಎಂಆರ್ ಶ್ರೀನಾಥ್,
ಮಾಲೀಕರು ಟೊಮೆಟೋ ಮಂಡಿ