ಗಗನಕ್ಕೇರಿದ ದಿನಬಳಕೆ ವಸ್ತುಗಳ ಬೆಲೆ

(ದೇವಪ್ಪ ಹಂಚಿನಾಳ)
ಗಬ್ಬೂರು.ಏ.೩೦-ಲಾಕ್ ಡೌನ್ ಜಾರಿಯಿಂದಾಗಿ ಆತಂಕಕ್ಕೋಳಗಾಗಿರುವ ಜನರ ಅನಿವಾರ್ಯತೆಯನ್ನು ದುರುಪಯೋಗ ಮಾಡಿಕೊಂಡಿರುವ ದೇವದುರ್ಗ ತಾಲೂಕಿನಯಾದ್ಯಂತ ಅನೇಕ ವ್ಯಾಪಾರಿಗಳು, ದಿನಸಿ ವಸ್ತುಗಳು, ತರಕಾರಿ ಇತ್ಯಾದಿ ಅಗತ್ಯ ವಸ್ತುಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವ ಮೂಲಕ ಸುಲಿಗೆಗೆ ಇಳಿದಿದ್ದಾರೆ.
ಲಾಕ್ ಡೌನ್ ಆದೇಶದಿಂದ ಸದ್ಯ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲಾಗಿರುವುದರಿಂದ ದಿನಸಿ ಹಾಗೂ ತರಕಾರಿ, ಇತರೆ ಅಗತ್ಯ ವಸ್ತುಗಳ ಪೂರೈಕೆ ಕೊರತೆ ಇದೆ. ಹೀಗಾಗಿ ತೆರದಿರುವ ಅಂಗಡಿಗಳಲ್ಲಿ ಹೆಚ್ಚಿನ ಹಣ ತೆತ್ತು ಪದಾರ್ಥಗಳನ್ನು ಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಅಕ್ಕಿ, ಎಣ್ಣೆ ಆಹಾರ ಧಾನ್ಯ, ಬೆಳೆ ಕಾಳುಗಳ ಬೆಲೆ ಶೇ/.೧೫-೨೫ರಷ್ಟು ಏರಿಕೆಯಾಗಿದೆ. ಅದೇ ರೀತಿ ಈರುಳ್ಳಿ, ಮೆಣಸಿನಕಾಯಿ, ಕ್ಯಾರೆಟ್ ಸೇರಿದಂತೆ ವಿವಿಧ ತರಕಾರಿಗಳ ಬೆಳೆ ಸಹ ಗಗನಕ್ಕೆ ಏರಿದೆ. ವ್ಯಾಪಾರಿಗಳು ಹೇಳಿದ ಬೆಲೆಗೆ ಕೊಳ್ಳಬೇಕಾದ ಅನಿವಾರ್ಯತೆಗೆ ಜನರು ಸಿಲುಕಿದ್ದಾರೆ.
ಖಾಲಿಯಾಗುತ್ತಿರುವ ಬಡವರ ಜೇಬು:ಲಾಕ್ ಡೌನ್ ನಿಂದ ಬಡವರು, ಕೂಲಿ ಕಾರ್ಮಿಕರು, ಸಣ್ಣಪುಟ್ಟ ವ್ಯವಹಾರ ಮಾಡುವವರ ವರಮಾನ ನಿಂತು ಹೋಗಿದೆ. ತಮ್ಮಲ್ಲಿರುವ ಅಲ್ಪಸ್ವಲ್ಪ ಹಣದಲ್ಲೇ ಜೀವನ ಮಾಡಬೇಕಾಗಿದೆ. ಇಂತಹ ಸಂದಿಗ್ಧತೆಯಲ್ಲಿ ಸಾಧ್ಯವಾದರೆ ಕಡಿಮೆ ಲಾಭ ಇಟ್ಟು ಮಾರಾಟ ಮಾಡಬೇಕು. ಕಷ್ಟದಲ್ಲಿರುವಾಗ ವಸ್ತುಗಳ ಕೊರತೆ, ನೆಪದಲ್ಲಿ ಗಾಯದ ಮೇಲೆ ಬರೆ ಎಳೆಯುವ ಪ್ರಯತ್ನ ಯಾರು ಮಾಡಬಾರದು ಎನ್ನುತ್ತಿದ್ದಾರೆ ಗ್ರಾಹಕರು. ಕೂಡಲೇ ತಾಲೂಕು ದಂಡಧಿಕಾರಿಯಾದ ಮಧುರಾಜ್ ಯಾಳಗಿ ಅವರು ಎಚ್ಚೆತ್ತಕೊಂಡು ಹೆಚ್ಚಿನ ಬೆಲೆಗೆ ಮಾರಟ ಮಾಡುವ ವ್ಯಾಪಾರ ಮಾಲಿಕರ ಮೇಲೆ ಕ್ರಿಮಿನಲ್ ಕೆಸ್ ದಾಖಲು ಮಾಡಬೇಕು ಎಂದು ಕೊತ್ತದೊಡ್ಡಿ ಗ್ರಾಮ ಪಂಚಾಯತಿ ಸದಸ್ಯನಾದ ಆಂಜನೇಯ ಕಾಟಮಳ್ಳಿ ಅವರು ಆಕ್ರೋಶ ವ್ಯಕ್ತಪಡಿಸಿದರು.