ಬೆಂಗಳೂರು,ಜೂ.೧೪-ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಸಾರ್ವಜನಿಕರಿಗೆ ಈಗ ಮತ್ತೊಂದು ಶಾಕ್ ಎದುರಾಗಿದ್ದು, ಕೋಳಿ ಮಾಂಸ, ಹಣ್ಣು, ತರಕಾರಿ, ಸೊಪ್ಪಿನ ಬೆಲೆ ಗಗನಕ್ಕೇರಿದೆ. ಈ ಮೂಲಕ ಮತ್ತೆ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಬೇಡಿಕೆಯಷ್ಟು ಪೂರೈಕೆ ಇಲ್ಲದ ಕಾರಣ ಅಗತ್ಯ ವಸ್ತುಗಳ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ಮುಂಬರುವ ದಿನಗಳಲ್ಲಿ ಮಳೆ ಮತ್ತಷ್ಟು ವಿಳಂಬವಾದರೆ ಅಗತ್ಯ ವಸ್ತುಗಳ ಬೆಲೆ ಮತ್ತುಷ್ಟು ದುಬಾರಿಯಾಗುವ ಸಾಧ್ಯತೆ ಇದೆ.
ಸದ್ಯಕ್ಕೆ ಮಾಂಸ ಪ್ರಿಯರಿಗೆ ಬೆಲೆ ಏರಿಕೆಯ ಬರೆ ಬಿದ್ದಿದ್ದು, ಬಾಯ್ಲರ್ ಕೋಳಿ ಕೆಜಿಗೆ ೧೭೦ ರೂ, ರೆಡಿ ಚಿಕನ್ ೨೭೦ ರೂ. ಸ್ಕಿನ್ ಲೆಸ್ ಕೆ.ಜಿ ೩೦೦ ರೂ. ಮೊಟ್ಟೆ ಕೋಳಿ (ಫಾರಂ) ಕೆಜಿಗೆ ೧೨೦ ರೂ. ಹೆಚ್ಚಳವಾಗಿದೆ.
ಕೇವಲ ಮಾಂಸ ಮಾತ್ರವಲ್ಲದೆ, ಸರಿಯಾದ ಮಳೆಯಾಗದ ಹಿನ್ನೆಲೆ, ತರಕಾರಿ, ಸೊಪ್ಪು, ಹಣ್ಣುಗಳ ಬೆಲೆಯಲ್ಲೂ ಏರಿಕೆಯಾಗಿದ್ದು, ಬೀನ್ಸ್ ಕೆಜಿಗೆ ೧೦೦ ರೂ. ತಲುಪಿದ್ರೆ, ನುಗ್ಗೆಕಾಯಿ ಸೇರಿದಂತೆ ತರಕಾರಿಗಳ ಬೆಲೆಯಲ್ಲೂ ಏರಿಕೆಯಾಗಿದೆ.
ಸೊಪ್ಪಿನ ಬೆಲೆಯಲ್ಲೂ ಮತ್ತಷ್ಟು ಹೆಚ್ಚಳವಾಗಿದ್ದು, ಕೊತ್ತಂಬರಿ ಕೆ.ಜಿಗೆ ೭೦ ರಿಂದ ೮೦ ರೂ.ತಲುಪಿದೆ. ಮಾರುಕಟ್ಟೆಯಲ್ಲಿ ಕೆ.ಜಿ ಗೆ ೧೦೦ ರೂ. ದಾಟಿದೆ.
ಇನ್ನೂ ಹಣ್ಣುಗಳ ಬೆಲೆಯಲ್ಲೂ ಏರಿಕೆಯಾಗಿದ್ದು, ಸೇಬು, ದಾಳಿಂಬೆ ಕೆಜಿಗೆ ೨೦೦ ರೂ. ದಾಟಿದ್ದರೆ, ಮೂಸಂಬಿ, ಸಪೋಟ, ಕರ್ಜೂರ, ಕಲ್ಲಂಗಡಿ, ಮಾವಿನ ಹಣ್ಣುಗಳ ದರವೂ ಏರಿಕೆಯಾಗಿದೆ.