ಕಲಬುರಗಿ,ಜು.3-ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮೊದಲೇ ತತ್ತರಿಸಿ ಹೋಗಿರುವ ಜನಕ್ಕೆ ದಿನೇ ದಿನೇ ಹೆಚ್ಚಾಗುತ್ತಿರುವ ತರಕಾರಿ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ.
ಮಳೆ ಕೊರತೆಯಿಂದಾಗಿ ತರಕಾರಿ ಬೆಲೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರಿಂದ ಗ್ರಾಹಕರು ಕಂಗಾಲಾಗುವಂತಾಗಿದೆ. ಕಳೆದ ಎರಡ್ಮೂರು ವಾರಗಳಿಂದ ತರಕಾರಿ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ನಡೆದಿದ್ದು, ಗ್ರಾಹಕರ ಜೇಬು ಖಾಲಿಯಾಗುತ್ತಿದೆ. ಇದರಿಂದಾಗಿ ಜನರಿಗೆ ತರಕಾರಿ ಖರೀದಿಸುವುದೇ ಕಷ್ಟವಾಗಿದೆ.
ಜಿಲ್ಲೆಯಲ್ಲಿ ಟೊಮೇಟೋ ಬೆಲೆ ಮತ್ತೆ ಹೆಚ್ಚಾಗಿದ್ದು, ಕಳೆದ ವಾರ ಪ್ರತಿ ಕಿಲೋ ಟೊಮೇಟೊಗೆ ನೂರು ರೂಪಾಯಿ ಇತ್ತು. ಈ ವಾರ ಪ್ರತಿ ಕಿಲೋ ಟೊಮೇಟೊ ನೂರಾ ನಲವತ್ತರಿಂದ ನೂರಾ ಐವತ್ತು ರೂಪಾಯಿಗೆ ಮಾರಾಟವಾಗುತ್ತಿದೆ.
ಹೀರೇಕಾಯಿ 80ರಿಂದ 90ರೂಗೆ ಜಿಗಿದಿದೆ. ಬೆಂಡೆಕಾಯಿ 70ರಿಂದ 80 ರೂ ಆಗಿದೆ. ಹಾಗಲಕಾಯಿ 90 ರೂ ಇದೆ. ಸವತೆಕಾಯಿ 80ರಿಂದ 100ರೂ ಆಗಿದೆ. ಮೆಣಸಿನಕಾಯಿ 100ರಿಂದ 120 ಆಗಿದೆ. ಬೀನ್ಸ್ 140ರಿಂದ 160 ರೂ ಆಗಿದೆ. ಆಲೂಗಡ್ಡೆ 80 ರಿಂದ 100ರೂ ಆಗಿದೆ. ಚವಳಿಕಾಯಿ 80ರಿಂದ 100ಕ್ಕೆ ಏರಿದೆ.
ಇನ್ನು ನೆರೆಯ ಯಾದಗಿರಿಯಲ್ಲಿ ತರಕಾರಿ ದರ ಕಳೆದ ವಾರಕ್ಕಿಂತ ಈ ವಾರ ಹೆಚ್ಚಾಗಿದೆ. ಕಳೆದ ವಾರ 80 ರೂ ಇದ್ದ ಟೋಮೇಟೊ ಬೆಲೆ ಈಗ 100ರೂ ಆಗಿದೆ. ಈರುಳ್ಳಿ 20ರಿಂದ 30 ರೂ ಆಗಿದೆ. ಬೆಳ್ಳುಳ್ಳಿ 140ರೂ ಆಗಿದೆ. ಬೆಂಡೆಕಾಯಿ 50ರೂ ಯಿಂದ 60 ರೂ ಆಗಿದೆ. ಸವತೆಕಾಯಿ, ಕ್ಯಾರೆಟ್, ಬಿನ್ಸ್, ಹಾಗಲಕಾಯಿ, ಜವಳಿಕಾಯಿ, ಬಿಟ್ ರೂಟ್, ಬದನೆಕಾಯಿ, ಹಸಿ ಮೆಣಸಿನಕಾಯಿ, ಹಾಗಲಕಾಯಿ ದರ ತಟಸ್ಥವಾಗಿದೆ.
ಮಳೆಯಾದರೆ ಬೆಲೆ ಇಳಿಕೆ
ತರಕಾರಿ ಬೆಲೆ ಹೆಚ್ಚಳಕ್ಕೆ ಮಳೆಯ ಕೊರತೆಯೇ ಕಾರಣವಾಗಿದ್ದು, ಮಳೆಯಾದರೆ ದಿಢೀರನೆ ತರಕಾರಿ ಬೆಲೆ ಇಳಿಕೆಯಾಗಲಿದೆ. ಮಳೆಯಾಗದೇ ಇರುವುದರಿಂದ ಬೇಡಿಕೆಗೆ ಅಗತ್ಯವಾದಷ್ಟು ತರಕಾರಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ ತರಕಾರಿ ಬೆಲೆ ಹೆಚ್ಚಳವಾಗಿದೆ. ಮಳೆ ಮತ್ತಷ್ಟು ವಿಳಂಬವಾದರೆ ತರಕಾರಿ ಬೆಲೆ ಮತ್ತಷ್ಟು ಹೆಚ್ಚಾಗಲಿದೆ.