ಗಗನಕ್ಕೇರಿದ ಟೊಮೆಟೊ ಧಾರಣೆ

ಬೆಂಗಳೂರು, ಜೂನ್ ೨೭- ಮದುವೆ ಸುಗ್ಗಿ ಮುಗಿದ ಬಳಿಕ ಟೊಮೆಟೊ ಬೆಲೆ ಆಕಾಶಕ್ಕೇರಿದೆ. ಕೆಲ ದಿನಗಳ ಹಿಂದೆ ಕೆಜಿಗೆ ೨೦ ರೂ.ಗೆ ಮಾರಾಟವಾಗುತ್ತಿತ್ತು. ಪ್ರಸ್ತುತ, ದೇಶದ ಹಲವು ಭಾಗಗಳಲ್ಲಿ ಟೊಮೆಟೊ ಚಿಲ್ಲರೆ ಬೆಲೆ ಕೆಜಿಗೆ ೮೦ ರೂ.ಗಳಾಗಿದ್ದು, ಎರ್ನಾಕುಲಂನಲ್ಲಿ ಕೆಜಿಗೆ ೧೧೩ ರೂ.ಗೆ ಮಾರಾಟವಾಗಿದೆ.
ಪೂರೈಕೆಯಲ್ಲಿ ತೀವ್ರ ಕೊರತೆಯಿಂದಾಗಿ ಎರಡು ದಿನಗಳ ಹಿಂದೆ ಟೊಮೆಟೊ ಬೆಲೆ ೮೦ ರೂ.ಗೆ ತಲುಪಿತ್ತು. ವರದಿ ಪ್ರಕಾರ, ಭಾನುವಾರ ಕೋಲಾರದ ಸಗಟು ಎಪಿಎಂಸಿ ಮಾರುಕಟ್ಟೆಯಲ್ಲಿ ೧೫ ಕೆಜಿ ಕ್ರೇಟ್ ಟೊಮೆಟೊ ೧೧೦೦ ರೂ.ಗೆ ಮಾರಾಟವಾಗಿದೆ. ಇದು ನಗರದ ಚಿಲ್ಲರೆ ಮಾರುಕಟ್ಟೆ ಮೇಲೂ ಪರಿಣಾಮ ಬೀರಿದೆ.
ಹೆಚ್ಚಿನ ನಗರಗಳಲ್ಲಿ ಟೊಮೆಟೊ ಬೆಲೆ ಕೆಜಿಗೆ ೮೦ ರೂ. ಸೋಮವಾರ, ಎರ್ನಾಕುಲಂನಲ್ಲಿ ಕೆಜಿ ಟೊಮೆಟೊ ಬೆಲೆ ೧೧೩ ರೂ. ಆಗಿದ್ದರೆ, ಆಡ್ರೆ, ಸಂಭಾಲ್ ಮತ್ತು ಕಿಯೋಂಜಾರ್‌ನಲ್ಲಿ ಕೆಜಿ ಟೊಮೆಟೊ ೧೦ ರೂ.ಗೆ ಲಭ್ಯವಿತ್ತು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಟೊಮೆಟೊ ದರ ಕಡಿಮೆಯಾಗಿದೆ ಎಂದು ರೈತರೊಬ್ಬರು ತಿಳಿಸಿದ್ದಾರೆ. ಕಳೆದ ವರ್ಷ ಬೀನ್ಸ್ ಬೆಲೆ ಗಗನಕ್ಕೇರಿದ್ದರಿಂದ ಕೋಲಾರದ ರೈತರು ಈ ವರ್ಷ ಬೀನ್ಸ್ ಬಿತ್ತನೆ ಆರಂಭಿಸಿದ್ದಾರೆ. ಆದರೆ, ಮುಂಗಾರು ದುರ್ಬಲಗೊಂಡಿದ್ದರಿಂದ ಬೆಳೆಗಳು ಒಣಗಿವೆ.
ಕಳೆದ ತಿಂಗಳು ಟೊಮೇಟೊ ಬೆಲೆ ಕುಸಿದಿದ್ದರಿಂದ ರೈತರು ಟೊಮೇಟೊ ಕೃಷಿಗೆ ಆಸಕ್ತಿ ತೋರುತ್ತಿಲ್ಲ. ಮೇ ತಿಂಗಳಿನಲ್ಲಿ ಟೊಮೇಟೊ ಬೆಲೆ ಕೆಜಿಗೆ ೩-೫ ರೂ.ಗೆ ಕುಸಿದಿತ್ತು. ಹಲವು ರೈತರು ಟ್ರ್ಯಾಕ್ಟರ್ ಓಡಿಸಿ ಬೆಳೆ ನಾಶಪಡಿಸಿದ ಹಲವು ಘಟನೆಗಳು ನಡೆದಿವೆ.