ಗಂವ್ಹಾರ ಗ್ರಾಮದಲ್ಲಿ ಡಿ.ಸಿ.ಯಶ್ವಂತ್ ವಾಸ್ತವ್ಯಜಿಲ್ಲಾಧಿಕಾರಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ

ಕಲಬುರಗಿ:ನ.19: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಿನ್ನೆಲೆಯಲ್ಲಿ ಗ್ರಾಮಸ್ಥರ ಅಹವಾಲು ಆಲಿಸಲು ಜಿಲ್ಲಾಧಿಕಾರಿ ಯಶ್ವಂತ್ ಗುರುಕರ್ ಅವರು ಜೇವರ್ಗಿ ತಾಲೂಕಿನ ಗಂವ್ಹಾರ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಬೆಳಗ್ಗೆ ತಮ್ಮ ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳನ್ನು ಗ್ರಾಮದ ಮಹಿಳೆಯರು ಕುಂಭ ಕಳಸದೊಂದಿಗೆ ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು.

ಗ್ರಾಮಸ್ಥರು ಡಿ.ಸಿ. ಯಶವಂತ ಮತ್ತು ನೂತನ ಸಹಾಯಕ ಆಯುಕ್ತೆ ಮಮತಾ ಕುಮಾರಿ, ತಹಸೀಲ್ದಾರ್ ಸಂಜೀವಕುಮಾರ್ ದಾಸರ್ ಅವರನ್ನು ಎತ್ತಿನ ಬಂಡಿಯಲ್ಲಿ ಕೂಡಿಸಿಕೊಂಡು ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಸಾರ್ವಜನಿಕ ಸಮಾರಂಭ ನಡೆಯಲಿರುವ ವೇದಿಕೆವರೆಗೆ ಕರೆದೊಯ್ದರು. ಹೀಗೆ, ಕರೆದೊಯ್ಯುವ ವೇಳೆ ಡೊಳ್ಳು, ಹಲಗೆ ವಾದನ, ಲಂಬಾಣಿ ಮಹಿಳೆಯರ ಸಾಮೂಹಿಕ ನೃತ್ಯ ಗಮನ ಸೆಳೆಯುವಂತಿತ್ತು.
ಕಾರ್ಯಕ್ರಮದ ಪ್ರಮುಖ ವೇದಿಕೆ ಸ್ಥಳವಾದ ಶ್ರೀ ತ್ರಿವಿಕ್ರಮಾನಂದ ಸರಸ್ವತಿ ಸ್ವಾಮಿಗಳ ಪ್ರೌಢಶಾಲೆ ಆವರಣಕ್ಕೆ ಮೆರವಣಿಗೆಯಲ್ಲಿ ಆಗಮಿಸುವುದಕ್ಕೂ ಮುನ್ನ ಜಿಲ್ಲಾಧಿಕಾರಿ ಯಶ್ವಂತ್ ಗುರುಕರ್ ಅವರು ಗ್ರಾಮದ ಶ್ರೀ ಸದ್ಗುರು ತ್ರಿವಿಕ್ರಮಾನಂದ ಸರಸ್ವತಿ ಸ್ವಾಮಿಗಳ ಮಠಕ್ಕೆ ತೆರಳಿ ಪೀಠಾಧಿಪತಿಗಳ ದರ್ಶನ ಪಡೆದರು. ನಂತರ ಶಾಲೆಯ ಆವರಣದಲ್ಲಿ ಗ್ರಾಮ ವಾಸ್ತವ್ಯದ ಸವಿನೆನಪಿಗಾಗಿ ಸಸಿಯೊಂದನ್ನು ನೆಟ್ಟು ನೀರುಣಿಸಿದರು.

ಸದ್ಗುರು ಶ್ರೀ ತ್ರಿವಿಕ್ರಮಾನಂದ ಸರಸ್ವತಿ ಸ್ವಾಮೀಜಿಗಳ ಮಠದ ಪೀಠಾಧಿಪತಿ ಸೋಪಾನನಾಥ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಿವಕಲಾ ಮಾಲಿಪಾಟೀಲ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭಾ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಾಣಿಕ ರಘೋಜಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ, ಜಿಲ್ಲಾ ಭೂದಾಖಲೆಗಳ ಇಲಾಖೆ ಅಧಿಕಾರಿ ಶಂಕರ್, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಅಬ್ದುಲ್ ನಬಿ, ತಾಲೂಕು ಆರೋಗ್ಯಾಧಿಕಾರಿ ಡಾ.ಸಿದ್ದು ಪಾಟೀಲ್, ಸಿ.ಡಿ.ಪಿ.ಒ ಭೀಮರಾಯ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು, ಗ್ರಾಮಸ್ಥರು, ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಗ್ರಾಮ ವಾಸ್ತವ್ಯ ಅಂಗವಾಗಿ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ಗ್ರಾಮದ ಹಿರಿಯರು ಸಾರ್ವಜನಿಕರು ರಕ್ತದೊತ್ತಡ, ಮಧುಮೇಹ ಸೇರಿದಂತೆ ಕಣ್ಣುಗಳ ತಪಾಸಣೆ ಮಾಡಿಸಿಕೊಂಡರು.

ಕಾರ್ಮಿಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪಶು ಸಂಗೋಪನೆ ಇಲಾಖೆಯಿಂದ ಮಳಿಗೆ ತೆರೆದು ಜನಪರ ಯೋಜನೆಗಳ ಮಾಹಿತಿ ನೀಡಲಾಯಿತು. ಕಂದಾಯ ಇಲಾಖೆಯಿಂದ ಕುಂದುಕೊರತೆ ಸ್ವೀಕಾರ ಕೇಂದ್ರ ತೆರೆಯಲಾಗಿದ್ದು, ಗಂವ್ಹಾರ ಸೇರಿದಂತೆ ಜೇವರ್ಗಿ ತಾಲೂಕಿನ ವಿವಿಧ ಗ್ರಾಮಗಳ ರೈತರು ತಮ್ಮ ಕಂದಾಯ ಸಂಬಂಧಿ ಅಹವಾಲುಗಳನ್ನು ಸಲ್ಲಿಸಿ ಸ್ಥಳದಲ್ಲಿಯೇ ಪರಿಹಾರ ಪಡೆದರು.

ಗಮನ ಸೆಳೆದ ಲಂಬಾಣಿ ನೃತ್ಯ
ಕಲಬುರಗಿ ಜಿಲ್ಲಾಧಿಕಾರಿ ಯಶ್ವಂತ್ ಗುರುಕರ್ ಅವರು ಜೇವರ್ಗಿ ತಾಲೂಕಿನ ಗಂವ್ಹಾರ ಗ್ರಾಮವನ್ನು ಪ್ರವೇಶಿಸುತ್ತಿದ್ದಂತೆಯೇ ಗ್ರಾಮದ ಮಹಿಳೆಯರು ತಲೆಯ ಮೇಲೆ ಕುಂಭ ಕಲಶ ಹೊತ್ತು ಆತ್ಮೀಯವಾಗಿ ಸ್ವಾಗತಿಸಿದರು.
ಈ ಮಧ್ಯೆ, ಗ್ರಾಮದ ಹೊರವಲಯಕ್ಕೆ ಜಿಲ್ಲಾಧಿಕಾರಿಗಳು ಆಗಮಿಸುತ್ತಿದ್ದಂತೆಯೇ ಮುಖ್ಯ ವೇದಿಕೆ ನಿರ್ಮಿಸಿರುವ ಸ್ಥಳದವರೆಗೆ ಬಂಜಾರ ಸಮುದಾಯದ ಮಹಿಳೆಯರು ಸಾಮೂಹಿಕ ನೃತ್ಯದ ಮೂಲಕ ಜಿಲ್ಲಾಧಿಕಾರಿಗಳೊಂದಿಗೆ ಹೆಜ್ಜೆ ಹಾಕಿದರು.