ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು 28 :- ಗಂಡಬೊಮ್ಮನಹಳ್ಳಿ ಗ್ರಾಮಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ (ಇಂದು) ನಿಗಧಿಪಡಿಸಿದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನವಲಮ್ಮ ರುದ್ರಮುನಿ ಹಾಗೂ ಉಪಾಧ್ಯಕ್ಷರಾಗಿ ಆರ್ ಬಸವರಾಜ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಗ್ರಾಮಪಂಚಾಯಿತಿ ಚುನಾವಣಾಧಿಕಾರಿಯಾಗಿರುವ ಕೂಡ್ಲಿಗಿ ಜಿ ಪಂ ಉಪವಿಭಾಗದ ಎಇಇ ಮಲ್ಲಿಕಾರ್ಜುನ ಘೋಷಿಸಿದ್ದಾರೆ.
ಇಂದು ಬೆಳಿಗ್ಗೆ 10ಗಂಟೆಯಿಂದ 12ಗಂಟೆ ಅವಧಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಒಟ್ಟು 17 ಸದಸ್ಯರ ಬಲಾಬಲ ಹೊಂದಿರುವ ಗಂಡಬೊಮ್ಮನಹಳ್ಳಿ ಗ್ರಾಮಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡ ಮಹಿಳೆ ಮೀಸಲಾತಿಯಲ್ಲಿ ನವಲಮ್ಮ ರುದ್ರಮುನಿ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗದ ಮೀಸಲಾತಿಯಲ್ಲಿ ಆರ್ ಬಸವರಾಜ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಇಬ್ಬರ ಆಯ್ಕೆಯನ್ನು ಅವಿರೋಧ ಆಯ್ಕೆ ಎಂದು ಚುನಾವಣಾಧಿಕಾರಿ ಮಲ್ಲಿಕಾರ್ಜುನ ಘೋಷಿಸಿದ್ದಾರೆ. ಒಟ್ಟು 17ಸದಸ್ಯರಲ್ಲಿ 15 ಸದಸ್ಯರು ಹಾಜರಿದ್ದು ಇಬ್ಬರು ಸದಸ್ಯರು ಗೈರಾಗಿದ್ದರು ಎಂದು ತಿಳಿದಿದೆ.
ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಗುಡೇಕೋಟೆ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.