ಗಂಟಲು ನೋವಿಗೆ ಮನೆಮದ್ದು


೧. ಗಂಟಲು ನೋವಿಗೆ ತುಂಬೆಸೊಪ್ಪಿನ ರಸವನ್ನು ಚಿಟಿಕೆ ಸುಣ್ಣ, ಚೂರು ಬೆಲ್ಲ ಹಾಕಿ ಮಿಶ್ರಮಾಡಿ ದೀಪದಲ್ಲಿ ಬಿಸಿಮಾಡಿ, ಗಂಟಲಿಗೆ ರಾತ್ರಿ ಮಲಗುವಾಗ ಪಟ್ಟು ಹಾಕಿದರೆ ಬೆಳಿಗ್ಗೆ ಏಳುವ ಹೊತ್ತಿಗೆ ನೋವು ಕಡಿಮೆ ಆಗಿರುತ್ತದೆ.
೨. ಗಂಟಲು ಹುಣ್ಣಿಗೆ: ನೇರಳೆ ಹಣ್ಣಿನ ಗಿಡದ ತೊಗಟೆಯ ಕಷಾಯವನ್ನು ಮಾಡಿ ಬಾಯಿ ಹಾಗೂ ಗಂಟಲಿನಲ್ಲಿ ಚೆನ್ನಾಗಿ ಮುಕ್ಕಳಿಸುವುದರಿಂದ ಗಂಟಲು ಹುಣ್ಣು ಬಹಳ ಬೇಗ ಮಾಯವಾಗುತ್ತದೆ.
೩. ಟಾನ್ಸ್‌ಲೈಟಿಸ್: ಬೆಚ್ಚಗಿನ ನೀರಿಗೆ ನಿಂಬೆರಸ, ಜೇನುತುಪ್ಪ, ಚಿಟಿಕೆ ಅಡುಗೆ ಉಪ್ಪು ಬೆರೆಸಿ ಚೆನ್ನಾಗಿ ಕಲಕಿ ಕುಡಿಯುತ್ತಾ ಬಂದರೆ ಆರಂಭಿಕ ಹಂತದಲ್ಲಿ ಇದ್ದದ್ದೇ ಆದರೆ ಬಹಳ ಬೇಗ ಕಡಿಮೆ ಆಗುತ್ತದೆ. ಇದು ನೆಗಡಿಗೂ ಉತ್ತಮ ಔಷಧ.
೪. ಗಂಟಲು ನೋವು, ಗಂಟಲು ಒಡೆದಿರುವುದು: ಒಂದೊಂದು ಚಮಚ – ಶುಂಠಿ ರಸ, ನಿಂಬೆರಸ, ಪುದಿನಾ ರಸಕ್ಕೆ ಅರ್ಧ ಚಮಚ ಜೇನುತುಪ್ಪ ಸೇರಿಸಿ ಸೇವಿಸಿದರೆ ಅನುಕೂಲವಾಗುವುದು. (ದಿನಕ್ಕೆ ಮೂರು ಬಾರಿ).
೫. ಅಡಿಕೆಯನ್ನು ಸ್ವಲ್ಪ ನೀರಿನಲ್ಲಿ ಹಾಕಿ ಕುದಿಸಿ ಕಷಾಯ ಮಾಡಿ ಶೋಧಿಸಿಕೊಂಡು ಕಷಾಯವನ್ನು ಎಷ್ಟು ಬಿಸಿ ಬೇಕೋ ಅಷ್ಟೇ ಹದಕ್ಕೆ ಬಾಯಿಗೆ ಹಾಕಿ ಮುಕ್ಕಳಿಸಿದರೆ ಗಂಟಲು ನೋವು ಶಮನವಾಗುತ್ತದೆ.
೬. ಗಂಟಲಿನ ಹುಣ್ಣಿಗೆ: ಅತಿಮಧುರ ಹಾಗೂ ಬೆಟ್ಟದ ನೆಲ್ಲಿಕಾಯಿ ಚಟ್ಟು ಈ ಎರಡನ್ನೂ ನೀರಿಗೆ ಹಾಕಿ ಕುದಿಸಿ ಅರ್ಧಾಂಶ ಇಳಿಸಿ ನಂತರ ಶೋಧಿಸಿ ದಿನಕ್ಕೆರಡು ಬಾರಿ ಸೇವಿಸುತ್ತಾ ಬಂದರೆ, ಗಂಟಲಿನ ಹುಣ್ಣುಗಳು ಮಾಯವಾಗುತ್ತವೆ.
೭. ಗಂಟಲು ಕೆರೆತವಿದ್ದಾಗ: ೨ ಲವಂಗ (ಸ್ವಲ್ಪ ಜಜ್ಜಿಕೊಳ್ಳಿ) ಕಲ್ಲುಪ್ಪು ಎರಡನ್ನೂ ಅಗಿದು ನಿಧಾನವಾಗಿ ಅದರ ರಸ ಸೇವನೆ ಮಾಡುತ್ತಿದ್ದರೆ ಕೆರೆತ, ಅದರಿಂದುಂಟಾಗುವ ಕೆಮ್ಮು ನಿವಾರಣೆಯಾಗುತ್ತದೆ.
೮. ಗಂಟಲು ನೋವಿಗೆ: ಬಿಸಿನೀರಿಗೆ ಸ್ವಲ್ಪ ಕಲ್ಲುಪ್ಪು, ಸ್ವಲ್ಪ ಅಡುಗೆ ಸೋಡ, ೨ ಹನಿಯಷ್ಟು ಗ್ಲಿಸರಿನ್ ಇವನ್ನು ಸೇರಿಸಿ, ಗಂಟಲಿನಲ್ಲಿ ಹಾಕಿ ಮುಕ್ಕಳಿಸಬೇಕು (ದಿನಕ್ಕೆ ಎರಡು ಬಾರಿ ೩ ದಿವಸ).
೯. ಧ್ವನಿ ಒಡೆದಾಗ ಮಾವಿನ ಎಲೆಯ ಕಷಾಯಕ್ಕೆ ಜೇನುತುಪ್ಪ ಸೇರಿಸಿ ಕುಡಿಯಿರಿ.
೧೦. ಗರಗದ ಸೊಪ್ಪನ್ನು ಹಸುವಿನ ಮಜ್ಜಿಗೆಯಲ್ಲಿ ಕದಡಿ ಸೇವಿಸಿದರೆ ಸ್ವರ ಒಡೆದಿರುವುದು ಗುಣವಾಗುವುದು.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧