ಗಂಟಲಲ್ಲಿ ಚಾಕೊಲೇಟ್ ಸಿಕ್ಕಿಹಾಕಿಕೊಂಡು ಬಾಲಕಿ ಸಾವು

ಉಡುಪಿ, ಜು.20-ಚಾಕೊಲೇಟ್​ ಗಂಟಲಲ್ಲಿ ಸಿಲುಕಿ ಶಾಲೆಗೆ ಹೊರಟಿದ್ದ ಬಾಲಕಿ ಮೃತಪಟ್ಟಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ನಡೆದಿದೆ.
ಮೃತ ಬಾಕಿಯನ್ನು ಬೈಂದೂರಿ ತಾಲ್ಲೂಕಿನ ಬಿಜೂರು ಗ್ರಾಮದ‌‌ ಕಬ್ಸೆ‌ ನಿವಾಸಿ ಸುಪ್ರೀತಾ ಪೂಜಾರಿ ಪುತ್ರಿ ಆರು ವರ್ಷದ ಸಮನ್ವಿ ಎಂದು ಗುರುತಿಸಲಾಗಿದೆ.
ಶಾಲೆಗೆ ಹೊರಟಿದ್ದ ಬಾಲಕಿ ಮನೆಯವರು ನೀಡಿದ ಚಾಕೊಲೇಟ್​ ಅನ್ನು ಬಾಯಿಗೆ ಹಾಕಿಕೊಂಡು ಶಾಲಾ ಬಸ್ ಬಂತೆಂದು ಬಸ್ ಬಳಿಗೆ ಓಡುವಾಗ ಚಾಕೊಲೇಟ್​ ನುಂಗಿದ ಪರಿಣಾಮ ಬಾಲಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಇಂದು ಬೆಳಗ್ಗೆ ಎಂದಿನಂತೆಯೇ ಶಾಲೆಗೆ ಹೊರಡಲು ಸಮವಸ್ತ್ರ ಧರಿಸಿ ಸಿದ್ಧವಾಗಿದ್ದರು. ಆದರೆ, ಬಾಲಕಿಗೆ ಶಾಲೆಗೆ ಹೋಗಲು ಒಪ್ಪಿರಲಿಲ್ಲ.
ಮನೆಯವರು ಆಕೆಗೆ ಪುಸಲಾಯಿಸಿ ಶಾಲೆಗೆ ಹೊರಡಿಸಿದ್ದು, ಕೈಯಲ್ಲೊಂದು ಚಾಕೊಲೇಟ್​​ ನೀಡಿದ್ದಾರೆ ಎನ್ನಲಾಗಿದೆ. ಅಷ್ಟೊತ್ತಿಗಾಗಲೇ ಶಾಲಾ ವಾಹನ ಬಂದಿದೆ. ಇದರಿಂದ ಗಾಬರಿಗೊಂಡ ಬಾಲಕಿ ಸಮನ್ವಿ ಕೈಯಲ್ಲಿದ್ದ ಚಾಕೊಲೇಟ್​ ಪ್ಲಾಸ್ಟಿಕ್ ಕವರ್ ಸಮೇತ ಬಾಯಿಗೆ ಹಾಕಿಕೊಂಡು ಬ್ಯಾಗ್ ಏರಿಸಿಕೊಂಡು ಶಾಲಾ ವಾಹನದತ್ತ ಓಡಿದ್ದಾಳೆ. ಹೀಗೆ ಓಡುವಾಗ ಚಾಕೊಲೇಟ್ ಏಕಾಏಕಿ ಗಂಟಲಲ್ಲಿ ಸಿಕ್ಕಿಕೊಂಡಿದೆ. ಇದರಿಂದಾಗಿ ಬಾಲಕಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ.
ವಾಹನ ಚಾಲಕ ಮಗುವಿಗೆ ಕೃತಕ ಉಸಿರಾಟ ನೀಡಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. ಕೂಡಲೇ ಬಾಲಕಿಯನ್ನು ಬೈಂದೂರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.