
ನವದೆಹಲಿ, ಫೆ. ೨೭- ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಜೀವನಾಧಾರಿತ ಚಿತ್ರದಲ್ಲಿ ನಾನು ನಟಿಸುತ್ತಿಲ್ಲ ಎಂದು ಬಾಲಿವುಡ್ ನಟ ರಣಬೀರ್ ಕಪೂರ್ ಸ್ಪಷ್ಟನೆ ನೀಡಿದ್ದಾರೆ.
ಸೌರವ್ ಗಂಗೂಲಿ ಜತೆ ರಣಬೀರ್ ಕಪೂರ್ ಕ್ರಿಕೆಟ್ ಆಡಿದ ಫೋಟೋಗಳು ವೈರಲ್ ಆಗಿವೆ. ಹಾಗಾಗಿ ಸೌರವ್ ಗಂಗೂಲಿ ಬಯೋಪಿಕ್‌ನಲ್ಲಿ ರಣಬೀರ್ ಕಪೂರ್ ನಟಿಸಬಹುದೇ ಎಂಬ ಅನುಮಾನ ಮೂಡಿತ್ತು. ಆ ರೀತಿಯ ಯಾವುದೇ ಆಫರ್ ಬಂದಿಲ್ಲ ಎಂದು ರಣಬೀರ್ ಕಪೂರ್ ಸ್ಪಷ್ಟಪಡಿಸಿದ್ಧಾರೆ.
ರಣಬೀರ್ ಕಪೂರ್ ಅಭಿನಯದ ‘ತು ಜೂಟಿ ಮೈ ಮಕ್ಕಾರ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದ ಪ್ರಮೋಷನ್‌ಗಾಗಿ ಅವರು ಕೋಲ್ಕತ್ತಾಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅವರು ಸೌರವ್ ಗಂಗೂಲಿ ಜತೆ ಸಮಯ ಕಳೆದಿದ್ದಾರೆ. ನಗರದ ಈಡನ್ ಗಾರ್ಡನ್ಸ್‌ನಲ್ಲಿ ಅವರಿಬ್ಬರು ಜೊತೆಯಾಗಿ ಕ್ರಿಕೆಟ್ ಆಡಿದ್ದಾರೆ. ಅವರ ಫೋಟೋ ಮತ್ತು ವಿಡಿಯೋ ವೈರಲ್ ಆಗಿವೆ. ಆದರೆ, ಸೌರವ್ ಗಂಗೂಲಿ ಜೀವನಾಧಾರಿತ ಸಿನಿಮಾದಲ್ಲಿ ತಾವು ನಟಿಸುತ್ತಿಲ್ಲ ಎಂಬುದನ್ನು ರಣಬೀರ್ ಕಪೂರ್ ಹೇಳಿದ್ದಾರೆ.
ದಾದಾ ಅವರು ಭಾರತದಲ್ಲಿ ಮಾತ್ರವಲ್ಲ, ಇಡೀ ಪ್ರಪಂಚದಲ್ಲಿ ಜೀವಂತ ದಂತಕಥೆ. ಅವರ ಬಯೋಪಿಕ್ ತುಂಬ ವಿಶೇಷವಾಗಿ ಇರಲಿದೆ. ದುರಾದೃಷ್ಟ ಎಂದರೆ ನನಗೆ ಯಾವುದೇ ಆಫರ್ ಬಂದಿಲ್ಲ ಎಂದು ಹೇಳಿದ್ದಾರೆ.
ನಾನು ಕಳೆದ ೧೧ ವರ್ಷಗಳಿಂದ ಗಾಯಕ ಕಿಶೋರ್ ಕುಮಾರ್ ಅವರ ಬಯೋಪಿಕ್ ಮೇಲೆ ಕೆಲಸ ಮಾಡುತ್ತಿದ್ದೇನೆ. ಅನುರಾಗ್ ಬಸು ಜತೆ ಸೇರಿಕೊಂಡು ನಾವು ಸ್ಕ್ರಿಪ್ಟ್ ಬರೆಯುತ್ತಿದ್ದೇವೆ. ನಾನು ಮಾಡುವ ಮುಂದಿನ ಬಯೋಪಿಕ್ ಅದೇ ಆಗಿರಲಿದೆ ಎಂಬ ಭರವಸೆ ಇದೆ ಎಂದು ರಣಬೀರ್ ಕಪೂರ್ ಹೇಳಿದ್ಧಾರೆ.