ಗಂಗಾ ಮತಸ್ಥರನ್ನು ಎಸ್‍ಟಿಗೆ ಸೇರಿಸಿ

ಮೈಸೂರು:ಜ:12: ಗಂಗಾ ಮತಸ್ಥರನ್ನು ಎಸ್‍ಟಿ ಪಟ್ಟಿಯಲ್ಲಿ ಸೇರಿಸಬೇಕೆಂದು ಮೈಸೂರು ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷರಾದ ಪ್ರೋ|| ವಸಂತಮ್ಮ ಸರ್ಕಾರಕ್ಕೆ ಆಗ್ರಹಿಸಿದರು.
ನಗರ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶೀಘ್ರವಾಗಿ ಗಂಗಾಮತಸ್ಥ, ಮೊಗವೀರ, ಕಬ್ಬಲಿಗ ಹಾಗೂ 39 ಪರ್ಯಾಯ ಪದಗಳಿಂದ ಕೂಡಿರುವ ಗಂಗಾಮತಸ್ಥ ಸಮುದಾಯವನ್ನು ಎಸ್‍ಟಿಗೆ ಸೇರಿಸಲು 40 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಎಸ್‍ಟಿಗೆ ಸೇರಿಸಲು ಸಮುದಾಯಕ್ಕೆ ಎಲ್ಲಾ ಅರ್ಹತೆಗಳಿದ್ದರೂ ನಮ್ಮ ಬೇಡಿಕೆಯನ್ನು ರಾಜಕೀಯವಾಗಿ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇದರಿಂದ ಸಮಾಜಕ್ಕೆ ಅನ್ಯಾಯವಾಗುತ್ತಿದೆ. ಸಮುದಾಯವನ್ನು ರಾಜಕೀಯ ಪ್ರೇರಿತವಾಗಿ ಬಲಪಶು ಮಾಡಲಾಗುತ್ತಿದೆ. ಈಗ ಈ ಎಲ್ಲಾ ಅರ್ಹ ದಾಖಲಾತಿಗಳೊಂದಿಗೆ ಕಡತವು ಸದ್ಯ ರಿಜಿಸ್ಟರ್ ಜನರಲ್ ಇಂಡಿಯಾದಲ್ಲಿದ್ದು ಇದಕ್ಕೆ ಕೇಂದ್ರ ಸರ್ಕಾರ ಸಮ್ಮತಿಸಬೇಕು. ನಮ್ಮ ಸಮಾಜ ಶೈಕ್ಷಣಿಕ, ಆರ್ಥಿಕ, ಸಮಾಜಿಕವಾಗಿ ಅತಿ ಹಿಂದುಳಿದಿದ್ದು, ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಇನ್ನಿತರೇ ಸಚಿವರು ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ಗಂಗಾಮತ ಮತ್ತು 39 ಪರ್ಯಾಯ ಪದಗಳಿಂದ ಕರೆಯಲ್ಪಡುವ ಈ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದರು.
ಆದ್ದರಿಂದ ಈ ಕೂಡಲೆ ಸರ್ಕಾರವು ಎಸ್‍ಟಿ ಪಟ್ಟಿಯಲ್ಲಿ ಸೇರಿಸಿ ಈ ಹಿಂದುಳಿದ ಗಂಗಾಮತಸ್ಥ ಸಮುದಾಯಕ್ಕೆ ನ್ಯಾಯ ನೀಡಲಿ ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸಿ. ಚಿಕ್ಕಲಿಂಗಸ್ವಾಮಿ, ಖಜಾಂಚಿ ನಾರಾಯಣಲೋಲಪ್ಪ ಉಪಸ್ಥಿತರಿದ್ದರು.