ಗಂಗಾವಳಿ ನದಿ ನೀರು ಹಸಿರು: ಜನರಲ್ಲಿ ಆತಂಕ

ಕಾರವಾರ ಮೇ 14: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ಅಂಕೋಲಾ ತಾಲೂಕಿನಲ್ಲಿ ಹರಿಯುತ್ತಿರುವ ಗಂಗಾವಳಿ (ಬೇಡ್ತಿ) ನದಿಯ ನೀರು ಇದ್ದಕ್ಕಿದ್ದಂತೆ ಒಂದು ವಾರದಿಂದ ಹಸಿರು ಬಣ್ಣಕ್ಕೆ ತಿರುಗಿದೆ. ಇದರಿಂದ ನದೀಪಾತ್ರದ ಗ್ರಾಮಗಳಾದ ಹೆಗ್ಗಾರ, ಕಲ್ಲೇಶ್ವರ, ಶೇವಕಾರ, ಗುಳ್ಳಾಪುರ, ಡೋಂಗ್ರಿ ಗ್ರಾಮಸ್ಥರಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ.
ಗಂಗಾವಳಿ ನದಿನೀರನ್ನು ಇಲ್ಲಿನ ಕೃಷಿಕರು ಕೃಷಿಗೆ ಬಳಸುವುದಲ್ಲದೇ ಅಗಸೂರಿನಲ್ಲಿ ಒಡ್ಡು ಕಟ್ಟಿ ಕಾರವಾರಕ್ಕೆ ಕುಡಿಯುವ ನೀರಾಗಿಯೂ ಬಳಸುತ್ತಾರೆ. ಆದರೆ ಈಗ ನೀರೆಲ್ಲ ಕಡು ಹಸಿರು ಬಣ್ಣಕ್ಕೆ ತಿರುಗಿ, ನೀರಿನ ಮೇಲ್ಭಾಗದಲ್ಲಿ ಹಸಿರು ಪಾಚಿಗಟ್ಟುವಿಕೆಯಂತ ರಚನೆ ಕಂಡುಬರುತ್ತಿದ್ದು ಜನ ಹಾಗೂ ಜಾನುವಾರುಗಳಿಗೆ ಮಾರಕವೇ ಎಂದು ಜನ ಸಂದಿಗ್ಧದಲ್ಲಿದ್ದಾರೆ. ಕಳೆದ ಹತ್ತು ವರುಷಗಳ ಹಿಂದೆ ಇದೇ ರೀತಿ ನೀರು ಹಸಿರುಗಟ್ಟಿದ ಸಂದರ್ಭದಲ್ಲಿ ಈ ಭಾಗದಲ್ಲಿ ಅತೀಹೆಚ್ಚಿನ ಚಿಕುನ್ ಗುನ್ಯಾ ಹಾಗೂ ಡೆಂಗ್ಯು ಖಾಯಿಲೆ ಬಂದಿತ್ತು ಎಂದು ಸಾರ್ವಜನಿಕರು ಹೆದರಿಕೊಂಡಿದ್ದಾರೆ. ಈಗಾಗಲೇ ಕರೋನಾದಿಂದ ಕಂಗೆಟ್ಟಿರುವ ಜನರಿಗೆ ಇದೊಂದು ಹೊಸ ಸಮಸ್ಯೆಯಾಗಿದ್ದು, ಸರಕಾರವು ತಕ್ಣಣ ಕ್ರಮಕೈಗೊಂಡು ಗಂಗಾವಳಿ ನದಿನೀರು ಹಸಿರಾಗಲು ಕಾರಣವನ್ನು ಕಂಡುಹಿಡಿಯಬೇಕೆಂದು ಜನಾಗ್ರಹವಾಗಿದೆ.