ಗಂಗಾವತಿ ನಗರಸಭೆ: 10.08 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ

ಗಂಗಾವತಿ ಮಾ.24: ಸ್ಥಳೀಯ ನಗರಸಭೆಯು 2021-22ನೇ ಸಾಲಿಗೆ 10.08 ಲಕ್ಷ ರೂ. ನಿರೀಕ್ಷಿತ ಬಜೆಟ್ ಮಂಡನೆ ಮಾಡಿತು.
ಇಲ್ಲಿನ ಐಎಂಐ ಭವನದಲ್ಲಿ ಮಂಗಳವಾರ ನಡೆದ ಸಾಮಾನ್ಯಸಭೆಯಲ್ಲಿ ಅಧ್ಯಕ್ಷೆ ಮಾಲಾಶ್ರೀ ಸಂದೀಪ ಅವರ ಒಪ್ಪಿಗೆ ಮೇರೆಗೆ ನಗರಸಭೆಯ ಸ್ಥಾಯಿಸಮಿತಿ ಅಧ್ಯಕ್ಷ ಜಬ್ಬಾರ್ ಬಿಚ್ಚಗತ್ತಿ ಅವರು ಅನುಮೋದನೆ ನೀಡಿದರು.
ವಿವಿಧ ಮೂಲಗಳಿಂದ 46,23,64,000 ರೂಪಾಯಿ ಆದಾಯವನ್ನು ನಗರಸಭೆ ನಿರೀಕ್ಷೆ ಮಾಡಿದ್ದು, 46,13,56,000 ಖರ್ಚಿನ ಆಯವ್ಯಯ ಮಂಡಿಸಲಾಯಿತು.
2021-22ನೇ ಸಾಲಿನ ಎಸ್.ಎಫ್.ಸಿ. ಮುಕ್ತ ನಿಧಿ ಅನುದಾನ-ರೂ. 1.50 ಕೋಟಿ, ಎಸ್‍ಎಫ್‍ಸಿ ವಿದ್ಯುತ್ ಅನುದಾನ-ರೂ. 6 ಕೋಟಿ, ಎಸ್‍ಎಫ್‍ಸಿ ವೇತನ ಅನುದಾನ- ರೂ. 5.72 ಕೋಟಿ, ಆಸ್ತಿ ತೆರಿಗೆ-ರೂ4.05 ಕೋಟಿ, 15ನೇ ಹಣಕಾಸು ಆಯೋಗದಿಂದ-ರೂ.6.50 ಕೋಟಿ, ಅಮೃತ ನಗರ ಯೋಜನೆಯಡಿ-ರೂ. 10 ಕೋಟಿ, ಎಸ್.ಎಫ್.ಸಿ ವಿಶೇಷ ಅನುದಾನ-ರೂ. 3 ಕೋಟಿ, ನೀರಿನ ಶುಲ್ಕುಗಳಿಂದ –ರೂ. 1.50 ಕೋಟಿ, ಮಳಿಗೆ ಮತ್ತು ನೆಲ ಬಾಡಿಗೆಗಳಿಂದ- ರೂ. 15 ಲಕ್ಷ, ಪರವಾನಿಗೆಗಳಿಂದ-ರೂ. 23 ಲಕ್ಷ ಸೇರಿ ಒಟ್ಟು 46,23,64,000 ಆದಾಯ ನಿರೀಕ್ಷಿಸಲಾಗಿದೆ.
ನಿರೀಕ್ಷಿತ ವೆಚ್ಚಗಳ ವಿವರ: ರಸ್ತೆಗಳ ಅಭಿವೃದ್ಧಿಗೆ- ರೂ. 3.12 ಕೋಟಿ, ಚರಂಡಿ, ಮಳೆ ನೀರು ಚರಂಡಿ ಮತ್ತು ಕಲ್ವರ್ಟ್‍ಗಳ ಅಭಿವೃದ್ಧಿಗೆ-ರೂ. 11.17 ಕೋಟಿ, ನೀರು ಸರಬರಾಜು ಕಾಮಗಾರಿಗಳಿಗೆ 1.88,50,000, ಘನತ್ಯಾಜ್ಯ ವಸ್ತು ವಿಲೇವಾರಿ ಅಭಿವೃದ್ಧಿಗಾಗಿ ರೂ. 2,62,50,000, ನಗರದ ವಿವಿಧ ಹೊಸ ಲೇಔಟ್‍ಗಳಲ್ಲಿ ಪಾರ್ಕ್ ಅಭಿವೃದ್ಧಿಗೆ ರೂ. 65,70,000, ವಿದ್ಯುತ್ ದೀಪಗಳ ಖರೀದಿಗಾಗಿ ರೂ. 34,50,000, ಸಿಬ್ಬಂದಿಗಳ ವೇತನಕ್ಕಾಗಿ ರೂ. 8 ಕೋಟಿ, ಶೌಚಗೃಹಗಳ ನಿರ್ವಹಣೆಗೆ ರೂ. 12 ಲಕ್ಷ, ಘನತ್ಯಾಜ್ಯ ವಸ್ತು ವಿಲೇವಾರಿ ನಿರ್ವಹಣೆ ಮತ್ತು ಹೊರಗುತ್ತಿಗೆ ಹಾಗೂ ಇತರೆ-ರೂ.2,50,46,000 ಸೇರಿ ಒಟ್ಟು ರೂ.46 ಕೋಟಿ 13 ಲಕ್ಷ 56 ಸಾವಿರ ನಿರೀಕ್ಷಿತ ಖರ್ಚು ಮಾಡುವ ಯೋಜನೆಯ ಬಜೆಟ್ ಮಂಡಿಸಲಾಯಿತು.
ಈ ವೇಳೆ ಪೌರಾಯುಕ್ತ ಅರವಿಂದ ಜಮಖಂಡಿ, ಉಪಾಧ್ಯಕ್ಷೆ ಸುಧಾ ಸೋಮನಾಥ, ಸ್ಥಾಯಿ ಸಮಿತಿ ಅಧ್ಯಕ್ಷ ಜಬ್ಬಾರ ಬಿಚ್ಚುಗತ್ತಿ, ನಗರಸಭೆ ಅಧಿಕಾರಿಗಳಾದ ದತ್ರಾತೇಯ ಹೆಗಡೆ, ನಾಗರಾಜ್, ಸ್ವಾತಿ, ಸೇರಿದಂತೆ ನಗರಸಭೆಯ ಎಲ್ಲಾ ವಾರ್ಡ್ ನ ಸದಸ್ಯರು ಇದ್ದರು.
====ಬಾಕ್ಸ್ ಮಾಡಿ===
ವಿಪಕ್ಷ ಸದಸ್ಯರಿಂದ ಸಭೆ ಬಹಿಷ್ಕಾರ
ನಗರಸಭೆಯ ಸಾಮಾನ್ಯ ಸಭೆಯಲ್ಲಿ ಉದ್ದೇಶಿತ ಅಂಶಗಳ ಬಗ್ಗೆ ಚರ್ಚೆ ಮಾಡುವುದು ಬಿಟ್ಟು, ಏಕಾಏಕಿ ಬಜೆಟ್ ಮಂಡನೆಗೆ ಮುಂದಾದ ಆಡಳಿತ ಪಕ್ಷದ ಕ್ರಮವನ್ನು ಖಂಡಿಸಿ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ನಡೆಯಿತು.
ಸಾಮಾನ್ಯ ಸಭೆ ಹಾಗೂ ಬಜೆಟ್ ಮಂಡನೆಯನ್ನು ಪ್ರತ್ಯೇಕವಾಗಿ ಮಾಡಬೇಕು. ವಾರ್ಡ್‍ನಲ್ಲಿ ಸಾಕಷ್ಟು ಸಮಸ್ಯೆಗಳು ಇವೆ. ಅವುಗಳ ಬಗ್ಗೆ ಚರ್ಚೆ ನಡೆಸಲು ಸಮಯ ಸಾಕಾಗುವುದಿಲ್ಲ. ಹಾಗಾಗಿ ಬಜೆಟ್ ಮಂಡನೆಯನ್ನು ಬೇರೆ ದಿನ ಇಟ್ಟುಕೊಳ್ಳಬೇಕು ಎಂದು ವಿಪಕ್ಷ ಸದಸ್ಯರಾದ ನವೀನಕುಮಾರ್, ರಮೇಶ್ ಚೌಡ್ಕಿ, ಪರಶುರಾಮ ಮಡ್ಡೇರ್, ಉಮೇಶ್ ಸಿಂಗನಾಳ್ ಸೇರಿದಂತೆ ಹಲವು ಸದಸ್ಯರು ಅಧ್ಯಕ್ಷರಿಗೆ ಮನವಿ ಮಾಡಿದರು. ಆದರೇ, ಆಡಳಿತಾರೂಢ ಕಾಂಗ್ರೆಸ್ ಸದಸ್ಯರು ಇದಕ್ಕೆ ಒಪ್ಪದೇ ಇದರಿಂದ ಕೆಂಡಾಮಂಡಲರಾದ ಬಿಜೆಪಿ ಸದಸ್ಯರು ಕೆಲ ಕಾಲ ಸಭೆಯ ಬಾವಿಗೆ ಇಳಿದು ಧರಣಿ ನಡೆಸಿದರು. ಬಳಿಕ ಹೊರಗಡೆ ಕೆಲಕಾಲ ಪ್ರತಿಭಟನೆ ನಡೆಸಿದ ಪ್ರಸಂಗ ಜರುಗಿತು.