ಗಂಗಾವತಿ ನಗರಸಭೆ ಸದಸ್ಯನ ಅಪಹರಣ: ಆರೋಪಿಗಳ ಬಂಧನಕ್ಕೆ ಕುಟುಂಬಸ್ಥರ ಪಟ್ಟು

ಗಂಗಾವತಿ, ನ.05: ಗಂಗಾವತಿ ನಗರಸಭೆ ಸದಸ್ಯ ಮನೋಹರಸ್ವಾಮಿ ಹಿರೇಮಠ ಅವರ ಅಪಹರಣ ಪ್ರಕರಣದಲ್ಲಿ ಭಾಗಿಯಾದ ಉಳಿದ ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಒತ್ತಾಯಿಸಿ ಮನೋಹರಸ್ವಾಮಿ ಹಿರೇಮಠ ಕುಟುಂಬಸ್ಥರು ನಗರದ ಪೊಲೀಸ್ ಠಾಣೆಯಲ್ಲಿ ಬುಧವಾರ ಪಿಐ ವೆಂಕಟಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ನಗರಸಭೆ ಸದಸ್ಯರಾದ ಮನೋಹರಸ್ವಾಮಿ ಹಿರೇಮಠ ಅವರ ಮೇಲೆ ಅ.30,2020 ರಂದು ಹಲ್ಲೆ ಮಾಡಿ ಕಾರವಾರದ ಹಳಿಯಾಳಕ್ಕೆ ಕರೆದುಕೊಂಡು ಅಪಹರಣ ಮಾಡಿರುವ ಕುರಿತು ಈಗಾಗಲೇ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೇ, ಈ ಪ್ರಕರಣದಲ್ಲಿ ಭಾಗಿಯಾದ ಕೆಲವರನ್ನು ಮಾತ್ರ ಬಂಧಿಸಲಾಗಿದ್ದು, ಇತರರನ್ನು ಎರಡು ದಿನದಲ್ಲಿ ಬಂಧಿಸಬೇಕು. ಇಲ್ಲದಿದ್ದರೆ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಧರಣಿ ನಡೆಸಲಾಗುವುದು ಎಂದು ಮನೋಹರಸ್ವಾಮಿ ಹಿರೇಮಠ ಅವರ ಕುಟುಂಬಸ್ಥರು ಎಚ್ಚರಿಸಿದರು.
ಮನವಿ ಸಲ್ಲಿಸುವ ವೇಳೆ ಪೂಜಾ ಮನೋಹರಸ್ವಾಮಿ ಹಿರೇಮಠ, ಶಶಿಧರಸ್ವಾಮಿ ಹಿರೇಮಠ, ಜಗದೀಶಸ್ವಾಮಿ ಹಿರೇಮಠ, ವಿಶ್ವನಾಥಸ್ವಾಮಿ ಹಿರೇಮಠ, ಮೃತ್ಯುಂಜಯ್ಯಸ್ವಾಮಿ ಹಿರೇಮಠ, ಸ್ವಾತಿ ಹಿರೇಮಠ, ಬಿ.ಶಶಿಕಲ್ ಕಂಪ್ಲಿ, ಪಲ್ಲವಿ ಹಿರೇಮಠ, ರಜಿತ್ ಹಿರೇಮಠ, ವಿನಯ ಹಿರೇಮಠ, ಮಂಜುನಾಥ ಹಿರೇಮಠ ಸೇರಿ ಕುಟುಂಬಸ್ಥರು ಉಪಸ್ಥಿತರಿದ್ದರು.