ಗಂಗಾವತಿ ತಾಲೂಕಾ ಸಮ್ಮೇಳನದ ಬೈಕ್ ಱ್ಯಾಲಿ


ಸಂಜೆವಾಣಿ ವಾರ್ತೆ
ಗಂಗಾವತಿ, ಮಾ.04: ನಗರದಲ್ಲಿ ಮಾರ್ಚ 6 ಮತ್ತು 7ರಂದು ನಡೆಯಲಿರುವ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಜಾಗೃತಿ ಬೈಕ್ ಱ್ಯಾಲಿಗೆ ಶಾಸಕ  ಪರಣ್ಣ ಮುನವಳ್ಳಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇಂದು ಕನ್ನಡ ಅಭಿಮಾನಿಗಳಿಂದ ಹಾಗೂ ಕಸಪಾ ಪದಾಧಿಕಾರಿಗಳಿಂದ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದ ಮೊದಲ ದಿನ ಸರ್ವಾಧ್ಯಕ್ಷರ ಭವ್ಯ ಮೆರವಣಿಗೆ ಮಾಡಲಾಗುವುದು. ಬಳಿಕ ವೇದಿಕೆ ಉದ್ಘಾಟನೆ ನೆರವೇರಲಿದೆ. ಶಿಗ್ಗವಿಯ ಗೋಟಗೋಡಿಯ ಜಾನಪದ ವಿಶ್ವ ವಿದ್ಯಾಲಯದ ಕುಲಪತಿ ಡಾ.ಟಿ.ಎಂ. ಭಾಸ್ಕರ್ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಬಳಿಕ ಎಂಟು ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಒಂದು ಬಹಿರಂಗ ಅಧಿವೇಶನವಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿ ಯುವಕರಿಗೆ ಮಾದರಿಯಾದ ಗಂಗಾವತಿ ತಾಲ್ಲೂಕಿನ ಪ್ರತಿಭೆಗಳನ್ನು ಗುರುತಿಸಿ ಸಾಧಕರಿಗೆ ಸನ್ಮಾನಿಸಲಾಗುತ್ತಿದೆ. ಕೊನೆಯಲ್ಲಿ ಸಮಾರೋಪ ಕಾರ್ಯಕ್ರಮವಿದ್ದು, ಯಾವುದೇ ಜಾತಿ,ಧರ್ಮ, ಮತಕ್ಕೆ ಸೀಮಿತಮಾಡದೇ ಸಮ್ಮೇಳನ ಆಯೋಜಿಸಲಾಗುತ್ತಿದೆ.
ಕನ್ನಡ ನಾಡು-ನುಡಿಯ ವಿಚಾರದಲ್ಲಿ ಕಳೆದ ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಗಂಗಾವತಿಯಲ್ಲಿ ಆಯೋಜಿಸುವ ಯಾವುದೇ ಹಂತದ ಸಮ್ಮೇಳನಗಳು ನಿರಸವಾಗಿಲ್ಲ. ಅತ್ಯಂತ ಹೆಚ್ಚು ಯಶಸ್ವಿಯಾಗುತ್ತವೆ.
ಹೀಗಾಗಿ ಮಾರ್ಚ್ 6 ಮತ್ತು 7ರಂದು ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಸಾರ್ವಜನಿಕರು, ಸಂಘಕಟರು, ಸಾಹಿತ್ಯಾಸಕ್ತರು ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಂಡು ಸಮ್ಮೇಳನದ ಯಶಸ್ವಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ, ಕಸಾಪದ ತಾಲೂಕಾ ಅಧ್ಯಕ್ಷ ಶ್ರೀನಿವಾಸ ಅಂಗಡಿ, ರುದ್ರೇಶ ಎಂ, ಪಂಪಣ್ಣ ನಾಯಕ್, ಚೆನ್ನಬಸವ ಜೇಕಿನ್, ಅಕ್ಕಿ ಚಂದ್ರಶೇಖರ,ಅಮೃತೇಶ ಸಜ್ಜನ, ವಾಸದೇವ ನವಲಿ, ವೀರುಪಾಕ್ಷಪ್ಪ ಶಿರವಾರ, ಲಿಂಗಾರೆಡ್ಡಿ ಆಲೂರು, ಸೇರಿದಂತೆ ಅನೇಕರು ಇದ್ದರು.