ಗಂಗಾವತಿ: ಜಿಟಿಜಿಟಿ ಮಳೆ

• ಜೀರಾಳ ಕಲ್ಗುಡಿ, ಬಾಪಿರೆಡ್ಡಿಕ್ಯಾಂಪ್, ಹಣವಾಳದಲ್ಲಿ ಸುರಿದ ಸಾಧಾರಣ ಮಳೆ
•ಮೊಡಕವಿದ ವಾತಾವರಣ
•ಭತ್ತ ರಕ್ಷಣೆ ಮಾಡಲು ರೈತರು ಹರಸಾಹಸ

ಗಂಗಾವತಿ ನ.18: ತಾಲೂಕಿನ ವಿವಿಧ ಗ್ರಾಮದಲ್ಲಿ ಮಂಗಳವಾರ ಸಂಜೆ ಸಾಧಾರಣ ಮಳೆಯಾದ ವರದಿಯಾಗಿದೆ.
ಬೆಳಗ್ಗೆಯಿಂದ ಮೊಡ ಕವಿದ ವಾತಾವರಣವಿದ್ದು, ತಂಪಾದ ಗಾಳಿ ಬೀಸತ್ತಿತ್ತು.
ಸಂಜೆ ವೇಳೆ ಜೀರಾಳ ಕಲ್ಗುಡಿ, ನವಲಿ,ಬಾಪಿರೆಡ್ಡಿಕ್ಯಾಂಪ್, ಹಣವಾಳ ಸೇರಿದಂತೆ ನಾನಾ ಕಡೆ ಜಿಟಿಜಿಟಿ ಮಳೆಯಾಗಿದೆ.
ನವಲಿ ಗ್ರಾಮದಲ್ಲಿ 15 ನಿಮೀಷ ಮಳೆ ಸುರಿದಿದೆ. ಜೀರಾಳ ಕಲ್ಗುಂಡಿ ವ್ಯಾಪ್ತಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಜಿಟಿಜಿಟಿ ಮಳೆ ಬಿದ್ದಿದೆ. ಅಲ್ಲದೇ ಈಗಾಗಲೇ ಭತ್ತ ಕೋಯ್ಲು ಮಾಡಿ ಬಯಲು ಪ್ರದೇಶದಲ್ಲಿ ಭತ್ತ ಒಣಗಲು ಹಾಕಲಾಗಿತ್ತು. ಆದರೆ, ದಿಢೀರ ಮಳೆ ಬಂದಿದ್ದರಿಂದ ರೈತರು ತಾಡಪಾಲು ಮುಚ್ಚಿ ಭತ್ತ ರಕ್ಷಣೆ ಮಾಡಲು ಹರಸಾಹಸ ಪಟ್ಟರು. ಹಣವಾಳ ಗ್ರಾಮದಲ್ಲಿ ಸಹ 1 ಗಂಟೆಗೂ ಅಧಿಕ ಸಾಧಾರಣ ಮಳೆಯಾಗಿದ್ದು, ರಸ್ತೆಯ ತಗ್ಗಿನಲ್ಲಿ ನೀರು ಸಂಗ್ರಹವಾಗಿದ್ದು, ವಾಹನ ಸವಾರರು ಹರಸಾಹಸ ಪಟ್ಟು ಸಂಚರಿಸಿದರು. ಇನ್ನೂ ಬಾಪಿರೆಡ್ಡಿ ಕ್ಯಾಂಪಿನಲ್ಲಿ ಸಹ ಮಳೆಯಾಗಿದ್ದು, ಭತ್ತದ ಗದ್ದೆಯಲ್ಲಿ ಬತ್ತದ ಪೈರು ನೆಲಕ್ಕೆ ಉರುಳಿದೆ. ಇನ್ನೂ ಭತ್ತದ ರಾಶಿ ಸುತ್ತಲೂ ತೆಗ್ಗು ತೋಡಿ ಮಳೆ ನೀರು ಹರಿಯುವಂತೆ ಕೃಷಿಕರು ಮಾಡಿದ್ದಾರೆ.
ಗಂಗಾವತಿ ನಗರದಲ್ಲೂ ಸಹ ಮೋಡ ಕವಿದ ವಾತವರಣವಿದ್ದು, ತಂಪಾದ ಗಾಳಿ ಬೀಸುತ್ತಿದ್ದು, ಮಳೆಯಾಗಿಲ್ಲ.
ಈಗಾಗಲೇ ಭತ್ತದ ಕೋಯ್ಲು ಆರಂಭವಾಗಿದೆ. ಭತ್ತದ ಬೆಲೆ ಸಹ ಇಳಿಕೆಯಾಗಿದೆ. ಆದರೆ, ಈಗ ಎರಡು ದಿನಗಳಿಂದ ಮಳೆ ಬರುತ್ತಿರುವುದರಿಂದ ರೈತರು ಮತ್ತಷ್ಟು ಸಂಕಷ್ಟ ಅನುಭವಿಸುವಂತಾಗಿದೆ.