ಅನ್ನನಾಳದ ಕ್ಯಾನ್ಸರ್: ಮಹಿಳೆಗೆ ಶಸ್ತ್ರಚಿಕಿತ್ಸೆ ಯಶಸ್ವಿ

• ಡಾ.ಅವಿನಾಶ ಭಾವಿಕಟ್ಟಿ ನೇತೃತ್ವದ ವೈದ್ಯರ ತಂಡ ಸಾಧನೆ
• 6 ದಿನಗಳ ಬಳಿಕ ಆಸ್ಪತ್ರೆಯಿಂದ ಮಹಿಳೆ ಬಿಡುಗಡೆ
• 5ಗಂಟೆ 30 ನಿಮಿಷ ಶಸ್ತ್ರಚಿಕಿತ್ಸೆ

ಗಂಗಾವತಿ ನ.19: ಅನ್ನನಾಳದ ಕ್ಯಾನ್ಸರ್‍ನಿಂದ ಬಳಲುತ್ತಿದ್ದ 52 ವರ್ಷದ ಮಹಿಳೆಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿ ಗುಣಪಡಿಸಲಾಗಿದೆ ಎಂದು ನಗರದ ಭಾವಿಕಟ್ಟಿ ಹೆರಿಗೆ ಹಾಗೂ ಶಸ್ತ್ರ ಚಿಕಿತ್ಸಾ ಆಸ್ಪತ್ರೆಯ ಎಂಡೋಸ್ಕೋಪಿಕ್ ಮತ್ತು ಲ್ಯಾಪ್ರೋಸ್ಕೋಪಿಕ್ ಸರ್ಜನ್ ಡಾ.ಅವಿನಾಶ ಭಾವಿಕಟ್ಟಿ ಹೇಳಿದರು.
ಆಸ್ಪತ್ರೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಅನ್ನನಾಳದ ಕ್ಯಾನ್ಸರ್‍ಗೆ (Diagnosis Carcinoma esophagus Procedure TransHiatal esophagectomy ) ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಗಂಗಾವತಿಯಲ್ಲಿ ನೆರವೇರಿಸಿದ ಮೊದಲ ಆಸ್ಪತ್ರೆ ಎಂಬ ಕೀರ್ತಿ ಭಾವಿಕಟ್ಟಿ ಆಸ್ಪತ್ರೆಗೆ ಸಲ್ಲುತ್ತದೆ ಎಂದರು.
ಗಂಗಾವತಿ ನಗರದ 52 ವರ್ಷದ ಮಹಿಳೆ ಅನ್ನನಾಳದ ಕ್ಯಾನ್ಸರ್‍ದಿಂದ ನರಳುತ್ತಿದ್ದರು. ಇವರು ನಾನಾ ಆಸ್ಪತ್ರೆಗೆ ಹೋಗಿದ್ದರು ಸಹ ಸೂಕ್ತ ಚಿಕಿತ್ಸೆ ಸಿಕ್ಕಿರಲಿಲ್ಲ. ಬಳಿಕ ನಮ್ಮ ಆಸ್ಪತ್ರ್ರೆಗೆ ಚಿಕಿತ್ಸೆಗೆ ಆಗಮಿಸಿದಾಗ ಅವರನ್ನು ಸಿಟಿ ಸ್ಕ್ಯಾನಿಂಗ್ ಸೇರಿ ವಿವಿಧ ತಪಾಸಣೆ ನಡೆಸಲಾಯಿತು. ಬಳಿಕ ವರದಿ ನೋಡಿದಾಗ ಈ ಮಹಿಳೆಗೆ ಅನ್ನನಾಳದ ಕ್ಯಾನ್ಸರ್ ದೃಢಪಟ್ಟಿತ್ತು ಎಂದರು.
5ಗಂಟೆ ಶಸ್ತ್ರಚಿಕಿತ್ಸೆ: ಆಸ್ಪತ್ರೆಯಲ್ಲಿ ಮಹಿಳೆಗೆ ನ.8 ರಂದು 5.30 ನಿಮಿಷದ ವರೆಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಮಹಿಳೆ ಈಗ ಆರೋಗ್ಯವಾಗಿದ್ದು, 6 ದಿನಗಳ ಬಳಿ ಆಸ್ಪತ್ರೆಯಿಂದ ಮನೆ ಕಳುಹಿಸಲಾಗಿದೆ ಎಂದು ಹೇಳಿದರು.
ಈ ಚಿಕಿತ್ಸೆಗೆ ಸುಮಾರು 2ರಿಂದ 3 ಲಕ್ಷ ರೂ. ಖರ್ಚಾಗುತ್ತಿದೆ. ಈ ಮಹಿಳೆ ಕುಟುಂಬವು ತೀರ ಬಡತನದಲ್ಲಿ ಜೀವನ ಸಾಗಿಸುತ್ತಿರುವ ಬಗ್ಗೆ ಮಾಹಿತಿ ತಿಳಿದಿತ್ತು. ಹಾಗಾಗಿ ಅತಿ ಕಡಿಮೆ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಕಾಯಿಲೆ ಗುಣಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪುರಷರಲ್ಲಿ ಪ್ರಧಾನವಾಗಿ ಅನ್ನನಾಳದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಬೆರಳಣಿಕೆಷ್ಟು ಮಹಿಳೆಯರಲ್ಲಿ ಈ ರೋಗ ಬರುತ್ತಿದೆ. ಆಹಾರ ನುಂಗುವುದರಲ್ಲಿ ತೊಂದರೆ ಅನ್ನನಾಳದ ಕ್ಯಾನ್ಸ್ಸರ್‍ನ ಮೊದಲ ಲಕ್ಷಣವಾಗಿದ್ದು, ಆ ಮೇಲೆ ಮೃದು ಆಹಾರ, ದ್ರವ ಪದಾರ್ಥವೂ ಒಳ ಹೋಗುವುದಕ್ಕೆ ತೊಂದರೆಯಾಗುತ್ತಿದೆ ಎಂದರು.
ಡಾ.ಅವಿನಾಶ ಭಾವಿಕಟ್ಟಿ ಅವರ ನೇತೃತ್ವದಲ್ಲಿ ಡಾ.ಶಿವಾನಂದ ಭಾವಿಕಟ್ಟಿ, ಡಾ.ಪ್ರಜ್ವಲ್, ಸಿಬ್ಬಂದಿಗಳಾದ ವೀರೇಶ, ಮಂಜುನಾಥ, ಮಹಾಂತೇಶ ಅವರು ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು.


ನಶಿಪುಡಿ ತಿಕ್ಕಿದ ಮಹಿಳೆಗೆ ಈ ಕಾಯಿಲೆ
ಸಿಗೆರೇಟ್, ಮದ್ಯಪಾನ, ಗುಟ್ಕಾ ಸೇರಿ ಧೂಮಪಾನ ಮಾಡುವ ವ್ಯಕ್ತಿಗಳಲ್ಲಿ ಅನ್ನನಾಳದ ಕ್ಯಾನ್ಸರ್ ಕಂಡು ಬರುತ್ತದೆ. ಈ ಕಾಯಿಲೆ ಮಹಿಳೆಯರಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಚಿಕಿತ್ಸೆ ಪಡೆದ ಮಹಿಳೆಯು ಹೆಚ್ಚಾಗಿ ನಶಿಪುಡಿ ತಿಕ್ಕಿದ ಪರಿಣಾಮ ಅನ್ನನಾಳದ ಕ್ಯಾನ್ಸರ್ ಬಂದಿದೆ ಎನ್ನುತ್ತಾರೆ ಡಾ.ಅವಿನಾಶ ಭಾವಿಕಟ್ಟಿ.


ಭಾವಿಕಟ್ಟಿ ಆಸ್ಪತ್ರೆಯ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮುಗಿಸಿದ್ದು, 52 ವರ್ಷದ ಬಡ ಮಹಿಳೆಯ ಜೀವ ರಕ್ಷಿಸಿರುವುದು ಹೆಮ್ಮೆಯಾಗುತ್ತಿದೆ.
-ಡಾ.ಶಿವಾನಂದ ಭಾವಿಕಟ್ಟಿ